ಬೈಲಹೊಂಗಲ (ಬೆಳಗಾವಿ): ತಾಲೂಕಿನ ಒಕ್ಕುಂದ ಗ್ರಾಮದಲ್ಲಿ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ನಿಮಿತ್ತ ಶನಿವಾರ ಬೆಳಗ್ಗೆ ಅಮೋಘವರ್ಷ ನೃಪತುಂಗ ಜ್ಯೋತಿ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ಗೊಂಬೆ ಮತ್ತು ಡೊಳ್ಳು ಕುಣಿತ ಮೆರವಣಿಗೆಯಲ್ಲಿ ಗಮನ ಸೆಳೆದವು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಒಕ್ಕುಂದ ಗ್ರಾಮದ 10ನೇ ವರ್ಷದ ಉತ್ಸವ ಹಿನ್ನೆಲೆ ಮಲಪ್ರಭಾ ನದಿ ದಂಡೆಯ ಮೇಲೆ ನೃಪತುಂಗ ಜ್ಯೋತಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಪರಮಪೂಜ್ಯ ರಾಚೋಟಿ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಅಲ್ಲಿಂದ ಟ್ರ್ಯಾಕ್ಟರ್ನಲ್ಲಿ ಜ್ಯೋತಿ ಯಾತ್ರೆಯು ಗಂಗಾಂಬಿಕೆ ದೇವಸ್ಥಾನ, ಗುರು ಮಡಿವಾಳೇಶ್ವರ ದೇವಸ್ಥಾನ, ತೇರಿನ ಓಣಿ, ಅಕ್ಕ ಮಹಾದೇವಿ ದೇವಸ್ಥಾನ, ಸಂತೆ ಓಣಿ ಮಾರ್ಗವಾಗಿ ಪ್ರೌಢಶಾಲಾ ಮೈದಾನಕ್ಕೆ ಬಂದು ಮುಕ್ತಾಯವಾಯಿತು.
ಮಕ್ಕಳ ಕುಣಿಸಿದ ಗೊಂಬೆಗಳು : ಮೆರವಣಿಗೆಯಲ್ಲಿ ಕಾರವಾರದ 'ಗಾರುಡಿ ಗೊಂಬೆ' ಕಲಾತಂಡದ ಗೊಂಬೆ ಕುಣಿತ ಎಲ್ಲರನ್ನು ಆಕರ್ಷಿತು. ಬೃಹದಾಕಾರದ ರಾಜ, ರಾಣಿ, ಮಂತ್ರಿ, ಗೂಳಿ ವೇಷದ ಗೊಂಬೆಗಳು ಹಾಗೂ ಗೊಂಬೆ ವೇಷಧಾರಿಗಳ ಹಾಸ್ಯ ನೆರೆದಿದ್ದ ಜನರ ಹುಬ್ಬೇರಿಸಿತು. ಗೊಂಬೆಗಳ ಜೊತೆಗೆ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಡೊಳ್ಳಿನ ನಿನಾದ : ರಾಮದುರ್ಗ ತಾಲೂಕಿನ ರವಡಿಕೊಪ್ಪದ ಬೀರಲಿಂಗೇಶ್ವರ ಕಲಾ, ಕ್ರೀಡೆ ಪೋಷಕ ಸಂಘದ ಕಲಾವಿದರ ಡೊಳ್ಳಿನ ನಿನಾದಕ್ಕೆ ಜನ ಮನಸೋತರು. ಮೈಮರೆತು ಡೊಳ್ಳು ಬಾರಿಸಿ ತಮ್ಮ ಕಲೆ ಪ್ರದರ್ಶಿಸಿ ಮೆರವಣಿಗೆ ಮೆರಗು ಹೆಚ್ಚಿಸಿದರು.
ಮೆರವಣಿಗೆಯಲ್ಲಿ ಗ್ರಾ.ಪಂ ಅಧ್ಯಕ್ಷ ಸಂಗಪ್ಪ ಭದ್ರಶೆಟ್ಟಿ, ಗಣಾಚಾರಿ ಎಕ್ಸಲೆಂಟ್ ಏಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಬಿ. ಗಣಾಚಾರಿ, ಉತ್ಸವ ಸಮಿತಿ ಗೌರವ ಅಧ್ಯಕ್ಷ ಸಿ.ಕೆ. ಮೆಕ್ಕೇದ, ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ, ಸಲಹಾ ಸಮಿತಿ ಅಧ್ಯಕ್ಷ ಡಾ.ಸಿ.ಬಿ.ಗಣಾಚಾರಿ, ಸಮಿತಿ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಭದ್ರಶೆಟ್ಟಿ, ಶಾಲಾ-ಕಾಲೇಜು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಸುತ್ತೂರು ಜಾತ್ರಾ ರಥೋತ್ಸವ ; ಡ್ರೋನ್ ಕ್ಯಾಮರಾದಲ್ಲಿ ಸಂಭ್ರಮ ಸೆರೆ - SUTTUR JATRA RATHOTSAVA