ಮುಂಬೈ:ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಟೀಂ ಇಂಡಿಯಾದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಈ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಅವರು ಹೊಂದಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಶಾರ್ದೂಲ್ ಠಾಕೂರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿ ವಿದರ್ಭ ತಂಡದ ವಿರುದ್ಧ ಗೆದ್ದು ಮುಂಬೈ ತನ್ನ 42ನೇ ರಣಜಿ ಟ್ರೋಫಿಗೆ ಮುತ್ತಿಕ್ಕಿದೆ. ಐಪಿಎಲ್ನಲ್ಲಿ ಶಾರ್ದೂಲ್ 2018ರಿಂದ 2021ರವರೆಗೆ ಸಿಎಸ್‌ಕೆ ತಂಡದ ಭಾಗವಾಗಿದ್ದರು. ನಂತರ ಅವರು 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು 2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದರು. ಈ ಆವೃತ್ತಿಯಲ್ಲಿ ಶಾರ್ದೂಲ್ ಮತ್ತೆ ಸಿಎಸ್‌ಕೆಗೆ ಮರಳಿದ್ದು, ಅವರನ್ನು 4 ಕೋಟಿ ರೂ.ಗೆ ಖರೀದಿ ಮಾಡಲಾಗಿದೆ.
ಮುಂಬೈ ತಂಡ ರಣಜಿ ಟ್ರೋಫಿಯನ್ನು ಗೆದ್ದ ನಂತರ ಐಪಿಎಲ್ ಟೂರ್ನಿ ಕುರಿತು ಮಾತನಾಡಿರುವ ಶಾರ್ದೂಲ್, ನಿಜ ಹೇಳಬೇಕೆಂದರೆ ಕಳೆದ ಐಪಿಎಲ್ ನನಗೆ ಅಷ್ಟೊಂದು ಒಳ್ಳೆಯದಾಗಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಆಲ್‌ರೌಂಡರ್ ಠಾಕೂರ್ 11 ಪಂದ್ಯಗಳಲ್ಲಿ ಕೇವಲ ಏಳು ವಿಕೆಟ್ಗಳನ್ನು ಪಡೆದಿದ್ದರು. ಬ್ಯಾಟಿಂಗ್ನಲ್ಲಿ 14.13ರ ಸರಾಸರಿಯಲ್ಲಿ ರನ್ ಗಳಿಸಿದ್ದರು.