ಹೈದರಾಬಾದ್:ಕ್ರಿಕೆಟ್ನಲ್ಲಿ ಸೋಲು- ಗೆಲುವು ಸಹಜ. ಗೆದ್ದಾಗ ಹೊಗಳಿ, ಸೋತಾಗ ತೆಗಳುವುದು ವಾಡಿಕೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಸೋತಾಗ ಕೋಟ್ಯಂತರ ಭಾರತೀಯ ಹೃದಯಗಳು ಭಾರವಾಗಿದ್ದವು. ತಂಡದ ಸದಸ್ಯರು ದಿಕ್ಕೆಟ್ಟಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ನೋವಿನಲ್ಲೂ ನಮ್ಮ ಆಟಗಾರರನ್ನು ಸಂತೈಸಿದರು. ಅದು ಕ್ರೀಡಾಸ್ಫೂರ್ತಿಯ ಸೆಲೆಯಾಗಿತ್ತು.
ನಡೆಯುತ್ತಿರುವ ಐಪಿಎಲ್ನಲ್ಲಿ ಪ್ಲೇಆಫ್ಗಾಗಿ ತಂಡಗಳ ನಡುವೆ ಬಿರುಸಿನ ಪೈಪೋಟಿ ಇದೆ. ಒಂದೊಂದು ಪಂದ್ಯವೂ ಮಹತ್ವದ್ದಾಗಿದೆ. ಸೋತಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ಗೆಲುವೊಂದೇ ಏಕೈಕ ಗುರಿಯಾಗಿದೆ. ಇಂತಿಪ್ಪ, ಮೇ 8 ರಂದು ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ 10 ವಿಕೆಟ್ಗಳ ಸೋಲು ಕಂಡಿತು. ಇದು ತಂಡಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ.
ತಂಡದ ಸಾಂಘಿಕ ಪ್ರದರ್ಶನದ ಹೊರತಾಗಿಯೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಸೋಲಿನಿಂದಾಗಿ ಪ್ಲೇ ಆಫ್ನಿಂದ ಹೊರಬೀಳುವ ಆತಂಕ ಹೆಚ್ಚಾಗಿದೆ. ಇದು ಎಲ್ಎಸ್ಜಿ ತಂಡದ ಆಡಳಿತ ಮಂಡಳಿಗೆ ಇನ್ನಿಲ್ಲದ ಕೋಪ ತರಿಸಿದೆ. ಇದಕ್ಕೆ ಸಾಕ್ಷಿ, ಪಂದ್ಯ ಮುಗಿದ ಬಳಿಕ ಮೈದಾನದ ಹೊರಗೆ ಅಭಿಮಾನಿಗಳ ಎದುರಲ್ಲೇ ತಂಡದ ಮಾಲೀಕರು, ನಾಯಕ ಕೆಎಲ್ ರಾಹುಲ್ ಜೊತೆ ಮಾತಿನ ಚಕಮಕಿ ನಡೆಸಿದ್ದು.
ರಾಹುಲ್- ಮಾಲೀಕರ ನಡುವೆ ಬಹಿರಂಗ ಮಾತು:ಮೈದಾನದ ಬೌಂಡರಿ ಗೆರೆಯ ಬಳಿ ಎಲ್ಎಸ್ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ರಾಹುಲ್ ಎದುರು ಸೋಲಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಯಕನ ನಿರ್ಧಾರಗಳು ಸರಿ ಇಲ್ಲ ಎಂಬಂತೆ ಅವರು ಕೋಪ ತೋರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.