ನವದೆಹಲಿ:ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ವಿಚ್ಛೇದನ ಪಡೆದಿರುವುದು ಅಧಿಕೃತವಾಗಿದೆ. ನಟಿ ಸನಾ ಜಾವೇದ್ ಅವರೊಂದಿಗೆ ಮಲಿಕ್ ವಿವಾಹವಾದ ಒಂದು ದಿನದ ಬಳಿಕ ಸಾನಿಯಾ ಕುಟುಂಬ ಇದನ್ನು ಖಚಿತಪಡಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಮಿರ್ಜಾ ಕುಟುಂಬಸ್ಥರು, ಸಾನಿಯಾ ತನ್ನ ವೈಯಕ್ತಿಕ ಜೀವನವನ್ನು ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದರು. ಆದರೆ, ಅದನ್ನೀಗ ಬಹಿರಂಗ ಮಾಡುವ ಕಾಲ ಬಂದಿದೆ. ಶೋಯೆಬ್ ಮಲಿಕ್ ಅವರ ಜೊತೆಗಿನ ವೈವಾಹಿಕ ಬಂಧವನ್ನು ಕೆಲವು ತಿಂಗಳುಗಳ ಹಿಂದೆಯೇ ಅಂತ್ಯಗೊಳಿಸಿದ್ದರು. ಪಾಕ್ ಕ್ರಿಕೆಟಿಗನ ಹೊಸ ಜೀವನಕ್ಕೆ ಸಾನಿಯಾ ಶುಭ ಹಾರೈಸುತ್ತಾರೆ ಎಂದು ಹೇಳಿದ್ದಾರೆ.
ಇದು ಸಾನಿಯಾ ಜೀವನದ ಅತಿ ಸೂಕ್ಷ್ಮ ಘಟ್ಟವಾಗಿದೆ. ಹಾಗಾಗಿ ಎಲ್ಲ ಅಭಿಮಾನಿಗಳು ಮತ್ತು ಹಿತೈಷಿಗಳು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ, ಅವರ ವೈಯಕ್ತಿಕ ಜೀವನವನ್ನು ಗೌರವಿಸುವಂತೆ ವಿನಂತಿಸುತ್ತೇವೆ ಎಂದಿದ್ದಾರೆ.
ನಿನ್ನೆಯಷ್ಟೇ ವಿವಾಹವಾಗಿದ್ದ ಮಲಿಕ್:ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜನವರಿ 20 ರಂದು ನಟಿ ಸನಾ ಜಾವೇದ್ ಅವರ ಜೊತೆಗೆ ನಿಖಾ ಮಾಡಿಕೊಂಡಿದ್ದರು. ಇದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಭಾರತ ಮತ್ತು ಪಾಕ್ ಕ್ರೀಡಾ ಜೋಡಿಯ ವಿವಾಹ ವಿಚ್ಛೇದನ ಪಡೆದಿದ್ದು ಎಲ್ಲೂ ಬಹಿರಂಗವಾಗಿರಲಿಲ್ಲ. ಹೀಗಾಗಿ ಇದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಉಂಟು ಮಾಡಿತ್ತು. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ಕುಟುಂಬಸ್ಥರು ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.