ಮುಂಬೈ(ಮಹಾರಾಷ್ಟ್ರ): "ಯುವ ಕ್ರಿಕೆಟಿಗರು ತಮಗೆ ಎದುರಾಗುವ ಅಡೆತಡೆಗಳು, ಅಡ್ಡಿಗಳಿಂದ ವಿಚಲಿತರಾಗಿ ತಮ್ಮ ಗಮನವನ್ನು ಬೇರೆಡೆ ಹರಿಸಬಾರದು" ಎಂದು ಶನಿವಾರ ಮುಂಬೈನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ವಿಶ್ವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕಿವಿಮಾತು ಹೇಳಿದರು.
ಬಿಸಿಸಿಐನ ವಾರ್ಷಿಕ 'ನಮನ್ ಅವಾರ್ಡ್ಸ್' ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಐಸಿಸಿ ಅಧ್ಯಕ್ಷ ಜಯ್ ಶಾ 'ಕರ್ನಲ್ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್, "ಯುವಜನತೆ ತಮ್ಮಲ್ಲಿರುವ ಪ್ರತಿಯೊಂದಕ್ಕೂ ಮೌಲ್ಯ ನೀಡಬೇಕು. ಆಟದಲ್ಲಿ ಅದಕ್ಕೆ ತಕ್ಕಂತೆ ವರ್ತಿಸಬೇಕು. ಆ ಮೂಲಕ ದೇಶದ ಹೆಸರನ್ನು ಬೆಳಗಿಸಬೇಕು" ಎಂದರು.
"ನೀವು ಕ್ರೀಡೆಯಲ್ಲಿ ಏಕಾಗ್ರತೆ ವಹಿಸಿ ಎಂದು ನಾನು ನಿಮಗೆ ಸಲಹೆ ನೀಡಲಾರೆ. ಆದರೆ ಅಡ್ಡಿಗಳು, ಅಡೆತಡೆಗಳು ಬರುತ್ತವೆ. ಇಂಥ ಅಡೆತಡೆಗಳು ನಿಮ್ಮ ವೃತ್ತಿಜೀವನವನ್ನೇ ಭಂಗಗೊಳಿಸಲು ಬಿಡಬೇಡಿ. ಪಂದ್ಯದ ಮೇಲಷ್ಟೇ ಗಮನವಿರಲಿ. ಹೀಗಾಗಿ ನಿಮ್ಮಲ್ಲಿರುವ ಪ್ರತಿಯೊಂದಕ್ಕೂ ಮೌಲ್ಯ ಕೊಡಿ. ನಮ್ಮ ಬಳಿ ಏನೂ ಇಲ್ಲದೇ ಇದ್ದಾಗಲೂ ನಾವು ಅಂಥ ಸಂದರ್ಭಗಳನ್ನು ನಿಭಾಯಿಸಿದ್ದೇವೆ ಎಂಬುದನ್ನು ನೆನಪಿಡಿ. ನಮ್ಮಲ್ಲಿ ಎಲ್ಲವೂ ಇರುವಾಗ ಅದರ ಮೌಲ್ಯವನ್ನರಿತು ಅದಕ್ಕೆ ತಕ್ಕಂತೆ ವರ್ತಿಸುವುದು ಆ ಮೂಲಕ ಪಂದ್ಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ ದೇಶದ ಹೆಸರನ್ನು ಬೆಳಗಿಸಬೇಕು. ನಿಮ್ಮಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆ ಇದೆ. ಹೋಗಿ, ನಿಮ್ಮ ಅತ್ಯುತ್ತಮವನ್ನು ಪ್ರದರ್ಶಿಸಿ. ಅವಕಾಶವನ್ನು ಹೆಚ್ಚೆಚ್ಚು ಸದುಪಯೋಗಪಡಿಸಿಕೊಳ್ಳಿ" ಎಂದು ಸಚಿನ್ ಯುವ ಕ್ರಿಕೆಟಿಗರಿಗೆ ಸಲಹೆ ನೀಡಿದರು.
ಟೆಸ್ಟ್, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ದಾಖಲೆ ಸಚಿನ್ ಹೆಸರಿನಲ್ಲಿದೆ. ಅದೇ ರೀತಿ, ಎರಡೂ ಮಾದರಿಯಲ್ಲಿ 100 ಶತಕ ಸಿಡಿಸಿದ ವಿಶ್ವದ ಏಕೈಕ ಆಟಗರನೂ ಸಚಿನ್ ಎಂಬುದು ಇಂದಿಗೂ ಅಳಿಸಲಾಗದ ದಾಖಲೆ.