ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಇಂಟರೆಸ್ಟಿಂಗ್ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಜಸ್ಥಾನದ ಸುಶಿಲ್ ಮೀನಾ ಎಂಬ 12 ವರ್ಷದ ಬಾಲಕಿಯ ಕ್ರಿಕೆಟ್ ಪ್ರತಿಭೆ ಮತ್ತು ಆಸಕ್ತಿಯನ್ನು ನೀವು ನೋಡಬಹುದು. ಬರಿಗಾಲಲ್ಲೇ ಓಡಿ ಬಂದು ಬೌಲಿಂಗ್ ಮಾಡುತ್ತಿರುವ ಪರಿಯನ್ನು ಸಚಿನ್ ಮೆಚ್ಚಿಕೊಂಡಿದ್ದಾರೆ.
"ಸುಶಿಲ್ ಮೀನಾ ಬೌಲಿಂಗ್ ಶೈಲಿ ನಯವಾದ, ನಿರಾಯಾಸದ ಮತ್ತು ವೀಕ್ಷಿಸಲು ಸುಂದರ ಎನಿಸುತ್ತಿದೆ" ಎಂದು ಸಚಿನ್ ಬರೆದಿದ್ದಾರೆ. ಇದನ್ನು ನೀವು ನೋಡಿದ್ದೀರಾ? ಎಂದು ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರಿಗೆ ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಹೀರ್ ಖಾನ್, "ನೀವು ಹೇಳಿರುವುದು ಸರಿಯಾಗಿದೆ. ಖಂಡಿತವಾಗಿಯೂ ನಿಮ್ಮ ಮಾತನ್ನು ಒಪ್ಪುತ್ತೇನೆ. ಆಕೆಯ ಬೌಲಿಂಗ್ ಶೈಲಿ ನೋಡಲು ನಯವಾಗಿದ್ದು, ಆಕರ್ಷಕವಾಗಿದೆ. ಆಕೆ ಈಗಾಗಲೇ ಸಾಕಷ್ಟು ಭರವಸೆ ಮೂಡಿಸಿದ್ದಾಳೆ" ಎಂದು ತಿಳಿಸಿದ್ದಾರೆ.
ಈ ವೀಡಿಯೊ ಎಕ್ಸ್‌ನಲ್ಲಿ 3.9 ಮಿಲಿಯನ್ (39 ಲಕ್ಷ) ವೀಕ್ಷಣೆ ಪಡೆದಿದೆ. ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಕ್ರಿಕೆಟ್‌ಪ್ರಿಯರು ಬಾಲಕಿಯ ಕ್ರಿಕೆಟ್ ಪ್ರೇಮವನ್ನು ಪ್ರೋತ್ಸಾಹಿಸುತ್ತಿದ್ದಾರೆ.