ಬಾರಾಮುಲ್ಲಾ( ಜಮ್ಮು ಕಾಶ್ಮೀರ): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕುಟುಂಬ ಸಮೇತರಾಗಿ ಜಮ್ಮು- ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಕಣಿವೆ ರಾಜ್ಯದ ಸೌಂದರ್ಯ ಸವಿಯುವುದು ಅಷ್ಟೇ ಅಲ್ಲ ಅವರು ಗಡಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಸೈನಿಕರನ್ನು ಮಾತನಾಡಿಸಿ ಅವರ ಸೇವೆಯನ್ನು ಕೊಂಡಾಡಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಅವರು, ಕಮಾಂಡ್ ಪೋಸ್ಟ್ ತಲುಪಿ, ಸೈನಿಕರೊಂದಿಗೆ ಸಮಾಲೋಚನೆ ನಡೆಸಿ ಅವರನ್ನು ಪ್ರೋತ್ಸಾಹಿಸಿದರು. ಸೈನಿಕರ ಕುಶಲೋಪರಿ ವಿಚಾರಿಸಿ, ರಕ್ಷಣಾ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇನ್ನು ಸೈನಿಕರು ಕ್ರಿಕೆಟ್ ದಿಗ್ಗಜನೊಂದಿಗೆ ಮಾತನಾಡಿ ಸಂತಸಗೊಂಡರು.
ಈ ನಡುವೆ, ಕಾಶ್ಮೀರದ ರಸ್ತೆಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ದೃಶ್ಯವೂ ಕಂಡು ಬಂತು. ಕಣಿವೆ ರಾಜ್ಯ ಅದರಲ್ಲೂ ಕಮಾಂಡ್ ಪೋಸ್ಟ್ಗೆ ಸಚಿನ್ ಭೇಟಿ ನೀಡುವ ಸುದ್ದಿ ತಿಳಿದು ಅಲ್ಲಿ ಜನಸಾಗರವೇ ನೆರೆದಿತ್ತು. ಸಚಿನ್ ಆಗಮನಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದು, ಇದರಿಂದ ಗಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ಹರ್ಷವನ್ನೂ ಕೂಡಾ ವ್ಯಕ್ತಪಡಿಸಿದರು. ಭಾರತದ ಸರ್ವಶ್ರೇಷ್ಠ ಬ್ಯಾಟರ್ ಆಗಮನದಿಂದ ಕಾಶ್ಮೀರದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗಲಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗಡಿ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ, ಈ ಮೂಲಕ ಗಡಿ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ ಎಂದು ಸ್ಥಳೀಯರು ಖುಷಿ ಕೂಡಾ ಹಂಚಿಕೊಂಡರು.