ಕರ್ನಾಟಕ

karnataka

ETV Bharat / sports

ಮುಂಬೈ ವಿರುದ್ಧ ಆರ್​ಸಿಬಿಗೆ ವಿರೋಚಿತ ಸೋಲು: ಅಬ್ಬರದ ಬ್ಯಾಟಿಂಗ್​ ಮಾಡಿದ ಇಶಾನ್​, ಸೂರ್ಯ - IPL 2024

ಮುಂಬೈ ಇಂಡಿಯನ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಸೋಲು ಕಂಡಿದೆ. ಹಾರ್ದಿಕ್​ ಪಾಂಡ್ಯ ಪಡೆಗೆ ಟೂರ್ನಿಯಲ್ಲಿ ಎರಡನೇ ಜಯ ಲಭಿಸಿದೆ.

ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್

By ETV Bharat Karnataka Team

Published : Apr 12, 2024, 6:38 AM IST

Updated : Apr 12, 2024, 7:32 AM IST

ಮುಂಬೈ :ಐಪಿಎಲ್​ನ 25ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್​ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಆರ್​ಸಿಬಿ ನೀಡಿದ 197 ರನ್​ಗಳ ಬೃಹತ್​ ಟಾರ್ಗೆಟ್​ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್​ 15.3 ಓವರ್​ಗಳಲ್ಲೇ 3 ವಿಕೆಟ್​ ಕಳೆದುಕೊಂಡು ಗೆಲುವಿನ ದಡ ಸೇರಿತು. ಈ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಸತತ 2ನೇ ಜಯ ಕಂಡಿರುವ ಮುಂಬೈ ಅಂಕಪಟ್ಟಿಯಲ್ಲಿ ಚೇತರಿಕೆ ಕಂಡಿದ್ದು, ಏಳನೇ ಸ್ಥಾನಕ್ಕೇರಿದೆ. ಇತ್ತ ಆರ್​ಸಿಬಿ ಸೋಲಿನ ದವಡೆಯಿಂದ ಹೊರಬರದೇ 9ನೇ ಸ್ಥಾನದಲ್ಲಿದೆ.

ಮುಂಬೈನ ವಾಂಖೆಂಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ನೀಡಿದ ಗುರಿಯನ್ನು ಚೇಸ್​ ಮಾಡಲು ಮುಂಬೈ ಪರ ರೋಹಿತ್​ ಶರ್ಮಾ ಮತ್ತು ಇಶಾನ್​ ಕಿಶನ್ ಆಗಮಿಸಿದರು. ಆರ್​ಸಿಬಿಯ ಕಳಪೆ ಬೌಲಿಂಗ್​ನಿಂದಾಗಿ ಆರಂಭದಲ್ಲೇ ಇಶಾನ್- ರೋಹಿತ್​ ಜೋಡಿ ಸಿಕ್ಸರ್​ ಮತ್ತು ಬೌಂಡರಿಗಳ ಮಳೆಯನ್ನೇ ಸುರಿಸಿದರು. ಕೇವಲ 8.5 ಓವರ್​ಗಳಲ್ಲಿ ಈ ಜೋಡಿ 101 ರನ್​ಗಳ ಜೊತೆಯಾಟವಾಡಿತು. ಬಳಿಕ ಇಶಾನ್​ ತಮ್ಮ ವಿಕೆಟ್​ ಕಳೆದುಕೊಂಡರು. 34 ಎಸೆತಗಳನ್ನು ಎದುರಿಸಿದ ಇಶಾನ್​ 7 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್​ ನೆರೆವಿನಿಂದ 69 ರನ್​ಗಳನ್ನು ಕಲೆಹಾಕಿದರು.

ಇತ್ತ ರೋಹಿತ್​ ಕೂಡ 2ನೇ ವಿಕೆಟ್​ಗೆ ಒಂದಾಗ ಸೂರ್ಯಕುಮಾರ್ ಯಾದವ್ ಜೊತೆಗೂಡಿ ತಮ್ಮ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದರು. ತಲಾ 3 ಬೌಂಡರಿ, ಸಿಕ್ಸರ್​ ಹೊಡೆದು 38 ರನ್​ಗಳಿಗೆ ತಮ್ಮ ಆಟ ನಿಲ್ಲಿಸಿದರು. ಈ ವೇಳೆ, ಸಿಡಿದೆದ್ದ ಸೂರ್ಯಕುಮಾರ್​ ಆರ್​ಸಿಬಿ ಬೌಲರ್ಸ್​ಗಳನ್ನು ಕಾಡಿದರು. ಕೇವಲ 19 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 52 ರನ್​ಗಳ ಕೊಡುಗೆಯನ್ನು ತಂಡದ ಗೆಲುವಿಗೆ ಅರ್ಪಿಸಿ ನಿರ್ಗಮಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ ಕೇವಲ 6 ಎಸೆತಗಳಲ್ಲಿ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 21 ರನ್ ಮತ್ತು ತಿಲಕ್ ವರ್ಮಾ 10 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ ಅಜೇಯ 16 ರನ್ ಗಳಿಸಿದರು. ಈ ಮೂಲಕ ಆರ್​ಸಿಬಿ ಎದುರು ಮುಂಬೈ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು.

ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 196 ರನ್​ಗಳನ್ನು ಕಲೆ ಹಾಕಿತ್ತು. ನಾಯಕ ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್ ಹಾಗೂ ದಿನೇಶ್ ಕಾರ್ತಿಕ್ ಅವರ ಅರ್ಧ ಶತಕದ ನೆರವಿನಿಂದ ಆರ್​ಸಿಬಿ ಈ ಬೃಹತ್​ ಮೊತ್ತ ಪೇರಿಸಲು ಸಾಧ್ಯವಾಗಿತ್ತು. ಮುಂಬೈ ಪರ ಜಸ್ಪೀತ್​ ಬೂಮ್ರಾ 5 ವಿಕೆಟ್​ ಪಡೆದು ಮಿಂಚಿದರು.

ಇದನ್ನೂ ಓದಿ :IPL: ಆರ್​​ಸಿಬಿಗೆ ಡು ಪ್ಲೆಸಿಸ್, ಪಾಟಿದಾರ್, ಕಾರ್ತಿಕ್ ಫಿಫ್ಟಿ ಬಲ; ಮುಂಬೈ ಗೆಲುವಿಗೆ 197 ರನ್ ಟಾರ್ಗೆಟ್​ - MI vs RCB

Last Updated : Apr 12, 2024, 7:32 AM IST

ABOUT THE AUTHOR

...view details