ಪ್ಯಾರಿಸ್ (ಫ್ರಾನ್ಸ್): ಭಾನುವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ರೋಯಿಂಗ್ ಪುರುಷರ ಸಿಂಗಲ್ಸ್ ಸ್ಕಲ್ಸ್ ರೆಪೆಚೇಜ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಭಾರತದ ಬಾಲರಾಜ್ ಪನ್ವಾರ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನೂ ಬರೆದಿದ್ದಾರೆ. 25ರ ಹರೆಯದ ಬಾಲರಾಜ್ ರೆಪೆಚೇಜ್ 2ರಲ್ಲಿ 7:12.41 ನಿಮಿಷಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರೇ ಮೊನಾಕೊದ ಕ್ವೆಂಟಿನ್ ಆಂಟೊಗನೆಲ್ಲಿ ಮೊದಲ ಸ್ಥಾನ ಪಡೆದರು.
ಪ್ರತಿ ರೆಪೆಚೇಜ್‌ನಿಂದ ಅಗ್ರ ಇಬ್ಬರು ಆಟಗಾರರು ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಿರುವ ಪನ್ವಾರ್ ಇದೀಗ ಜುಲೈ 30 ಮಂಗಳವಾರ ಮಧ್ಯಾಹ್ನ 1:40ಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧೆಯುದ್ದಕ್ಕೂ ಪನ್ವಾರ್ ಎರಡನೇ ಸ್ಥಾನದಲ್ಲಿ ಉಳಿದರು. ಮೊದಲ 500 ಮೀಟರ್ ದೂರವನ್ನು 1: 44.13 ನಿಮಿಷ, 1000 ಮೀಟರ್ ದೂರವನ್ನು 3:33.94 ನಿಮಿಷ, ನಂತರ 1500 ಮೀಟರ್ ದೂರವನ್ನು 5:23.22 ನಿಮಿಷ ಇದರ ನಂತರ 2000 ಮೀಟರ್ ದೂರದ ಓಟವನ್ನು 7:12.41 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಶನಿವಾರ ಇದೇ ಸ್ಪರ್ಧೆಯಲ್ಲಿ ಬಾಲರಾಜ್ 7:07:11 ನಿಮಿಷಗಳಲ್ಲಿ ಕ್ರಮಿಸಿ ನಾಲ್ಕನೇ ಸ್ಥಾನ ಪಡೆದು ರಿಪಿಚೇಜ್ ಸುತ್ತಿಗೆ ತಲುಪಿದ್ದರು.