ಪ್ಯಾರಿಸ್ (ಫ್ರಾನ್ಸ್):ಒಲಿಂಪಿಕ್ಸ್ನಲ್ಲಿ ಭಾಗವಹಿಸಿರುವ ಭಾರತದ ಏಕೈಕ ರೋಯಿಂಗ್ ಪಟು ಬಲರಾಜ್ ಪನ್ವಾರ್ ವರೆಸ್-ಸುರ್-ಮಾರ್ನೆ ನಾಟಿಕಲ್ನಲ್ಲಿ ನಡೆದ ಪುರುಷರ ಸಿಂಗಲ್ಸ್ ಸ್ಕಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐದನೇ ಸ್ಥಾನ ಪಡೆಯುವ ಮೂಲಕ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
25 ವರ್ಷದ ಬಲರಾಜ್ ಪನ್ವಾರ್ 7:05.10 ಸಮಯದೊಂದಿಗೆ ಐದನೇ ಸ್ಥಾನ ಪಡೆದರು, ಇದು ಪದಕ ಸುತ್ತಿಗೆ ಅರ್ಹತೆ ಪಡೆಯಲು ಸಾಕಾಗಲಿಲ್ಲ. ಇದೀಗ ಬಲರಾಜ್ ಈವೆಂಟ್‌ನ ಸಿ ಮತ್ತು ಡಿ ಸೆಮಿ - ಫೈನಲ್‌ಗಳಲ್ಲಿ ಭಾಗವಹಿಸಲಿದ್ದಾರೆ. ಇದು ಕೇವಲ ಶ್ರೇಯಾಂಕದ ಪಂದ್ಯವಾಗಿರಲಿದ್ದು ಈವೆಂಟ್ನಲ್ಲಿ ಎಷ್ಟನೇ ಶ್ರೇಯಾಂಕ ಪಡೆದರು ಎಂದು ನಿರ್ಧಾರವಾಗುತ್ತದೆ.
ಇದಕ್ಕೂ ಮೊದಲ ಶನಿವಾರ ನಡೆದ ಪುರುಷರ ಸಿಂಗಲ್ ರೋಯಿಂಗ್ ಈವೆಂಟ್‌ನ ಮೊದಲ ಹೀಟ್‌ನಲ್ಲಿ (ಆರಂಭಿಕ ರೇಸ್) ನಾಲ್ಕನೇ ಸ್ಥಾನ ಗಳಿಸಿ ರಿಪಿಚೇಜ್ ಸುತ್ತಿಗೆ ಎಂಟ್ರಿ ಪಡೆದಿದ್ದರು. ಈ ಪಂದ್ಯದಲ್ಲಿ ಬಾಲರಾಜ್ 7:7.11 ನಿಮಿಷಗಳಲ್ಲಿ ಗುರಿ ತಲುಪಿದ್ದರು.
ಬಳಿಕ ಭಾನುವಾರ ನಡೆದ ಸಿಂಗಲ್ಸ್ ಸ್ಕಲ್ಸ್ ರೆಪೆಚೇಜ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಪನ್ವಾರ್ ಕ್ವಾರ್ಟರ್ ಫೈನಲ್ ತಲುಪಿದ್ದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನೂ ಬರೆದಿದ್ದರು. 25ರ ಹರೆಯದ ಬಾಲರಾಜ್ ರೆಪೆಚೇಜ್ 2ರಲ್ಲಿ 7:12.41 ನಿಮಿಷಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದಿದ್ದರು. ಅವರ ಅತ್ಯುತ್ತಮ ಪ್ರದರ್ಶನದಿಂದ ಭಾರತಕ್ಕೆ ಪದಕ ನಿರೀಕ್ಷೆ ಹುಟ್ಟಿಕೊಂಡಿತ್ತು.
ಇದನ್ನೂ ಓದಿ:ಒಲಿಂಪಿಕ್ ಫೆನ್ಸಿಂಗ್ ಕ್ರೀಡೆಯಲ್ಲಿ ಭಾಗವಹಿಸಿದ 7 ತಿಂಗಳ ಗರ್ಭಿಣಿ: ಸೋತರೂ ಜನರ ಹೃದಯ ಗೆದ್ದ ಕ್ರೀಡಾಪಟು - Paris Olympics 2024