ನವದೆಹಲಿ: ನನ್ನ ಮತ್ತು ಗೌತಮ್ ಗಂಭೀರ್ ಅವರ ಜುಗಲ್ಬಂದಿ ಭಾರತೀಯ ಕ್ರಿಕೆಟ್ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನದತ್ತ ಕೊಂಡೊಯ್ಯಲಿದೆ ಎಂದು ಟೀಂ ಇಂಡಿಯಾ ಏಕದಿನ ಮತ್ತು ಟೆಸ್ಟ್ ನಾಯಕ ರೋಹಿತ್ ಶರ್ಮಾ ಭರವಸೆ ನೀಡಿದ್ದಾರೆ.
ಇಂದಿನಿಂದ ಆರಂಭವಾಗಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
"ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಪಡೆದಿದ್ದೇನೆಂದು ಈಗಲೂ ಅನಿಸುತ್ತಿಲ್ಲ. ಬದಲಾಗಿ, ಟಿ20 ದೊಡ್ಡ ಟೂರ್ನಿಯ ನಿಮಿತ್ತ ನಾವು ವಿಶ್ರಾಂತಿ ಪಡೆಯುತ್ತಿದ್ದೇವೆ ಎಂದೆನಿಸುತ್ತಿದೆ" ಎಂದರು.
"ಹೊಸ ಯುಗ ಮತ್ತು ಹೊಸ ತರಬೇತುದಾರರೊಂದಿಗೆ ಹೊಸ ಶಕೆ ಆರಂಭಿಸುವ ಸಮಯ. ಭಾರತೀಯ ಕ್ರಿಕೆಟ್ ತಂಡವನ್ನು ಮತ್ತಷ್ಟು ಉನ್ನತ ಸ್ಥಾನದತ್ತ ಕೊಂಡೊಯ್ಯುವ ವೇದಿಕೆ. ಅದೇ ಲಯ, ಅದೇ ಉತ್ಸಾಹದೊಂದಿಗೆ ಮೈದಾನಕ್ಕೆ ಕಾಲಿಡುತ್ತಿದ್ದೇವೆ" ಎಂದು ಹೇಳಿದರು.
ಚುಟುಕು ಪಂದ್ಯಕ್ಕೆ ನಿವೃತ್ತಿ ಘೋಷಿಸಿದ ಬಳಿಕ ರೋಹಿತ್ ಶರ್ಮಾ ಅವರಿಗೆ ಇದು ಮೊದಲ ಏಕದಿನ ಪಂದ್ಯ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾದ ಗೌತಮ್ ಗಂಭೀರ್ ಅವರಿಗೂ ಇದು ಮೊದಲ ಸವಾಲು.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ಸ್ವೀಪ್ ಮಾಡಿರುವ ಭಾರತ, ಇದೀಗ ರೋಹಿತ್ ಶರ್ಮಾ ನೇತೃತ್ವದಲ್ಲಿ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದೆ.
ಭಾರತ ಮತ್ತು ಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ (ಆಗಸ್ಟ್ 2) ಆರಂಭವಾಗಿದೆ. ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಕೂಡ ಟಿ20 ವಿಶ್ವಕಪ್ 2024ರ ನಂತರ ಮೊದಲ ಬಾರಿಗೆ ಆಡುತ್ತಿರುವುದರಿಂದ ಭಾರತೀಯ ಅಭಿಮಾನಿಗಳ ಸುದೀರ್ಘ ಕಾಯುವಿಕೆಯೂ ಅಂತ್ಯವಾಗಿದೆ.
ಬಾರ್ಬಡೋಸ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಭಾರತ, 7 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸುವ ಮೂಲಕ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಅಲ್ಲದೆ 17 ವರ್ಷಗಳ ಬಳಿಕ ಭಾರತ ತಂಡ ಎರಡನೇ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು.
ಟಿ20 ವಿಶ್ವಕಪ್ ಟೂರ್ನಿ ಮುಗಿದ ದಿನವೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ನಾಯಕ ಎಂಬ ದಾಖಲೆ ರೋಹಿತ್ ಶರ್ಮಾ ಹೆಸರಲ್ಲಿದೆ. ಈ ಸರಣಿಯಲ್ಲಿ ಇನ್ನು ಮೂರು ಸಿಕ್ಸರ್ ಬಾರಿಸಿದರೆ, ಇಂಗ್ಲೆಂಡ್ ತಂಡದ ಮಾಜಿ ನಾಯಕನ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 5 ಶತಕಗಳೊಂದಿಗೆ ರೋಹಿತ್ 4231 ರನ್ ಗಳಿಸಿದ್ದಾರೆ.
ಇದನ್ನೂ ಓದಿ:ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ 'ಉಚಿತ ವೀಸಾ'!: ಹೀಗೊಂದು ಭರವಸೆ ನೀಡಿದ ಭಾರತೀಯ ಮೂಲದ ಸಿಇಒ - Paris Olympics