ಹೈದರಾಬಾದ್: ಮುಂಬೈನಲ್ಲಿ ಶನಿವಾರ 'ನಮನ್ ಪ್ರಶಸ್ತಿ' ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಟೀಂ ಇಂಡಿಯಾದ ಮಹಿಳಾ ಮತ್ತು ಪುರುಷ ಆಟಗಾರರು ಭಾಗಿಯಾಗಿದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್ ಅವರಿಗೆ 'ಜೀವಮಾನ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಈ ವೇಳೆ ಪುರುಷ, ಮಹಿಳಾ ಕ್ರಿಕೆಟಿಗರು ನಡೆಸಿದ ವಿಶೇಷ ಸಂದರ್ಶನ ಹಾಗು ನೆರೆದಿದ್ದ ಆಟಗಾರರ ವಿಡಿಯೋಗಳನ್ನು ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿವೆ. ಅದರಲ್ಲೂ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮತ್ತು ಸೃತಿ ಮಂಧಾನ ನಡುವಿನ ಚಿಟ್ಚಾಟ್ ಭಾರೀ ವೈರಲ್ ಆಗಿದೆ.
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಮಹಿಳಾ ಕ್ರಿಕೆಟಿಗರಾದ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡ್ರಿಗಸ್ ಅವರು ವೇದಿಕೆಯ ಮೇಲೆ ಸದ್ದು ಮಾಡಿದರು. ಈ ವೇಳೆ ಸ್ಮೃತಿ ಮಂಧಾನ ರೋಹಿತ್ ಶರ್ಮಾ ಅವರೊಂದಿಗೆ ಚಿಟ್ಚಾಟ್ ನಡೆಸಿದರು.
"ನಿಮ್ಮ ಸಹ ಕ್ರಿಕೆಟಿಗರು ನಿಮ್ಮ ಹವ್ಯಾಸಗಳ ಬಗ್ಗೆ ಗೇಲಿ ಮಾಡಿತ್ತಾರೆಯೇ"? ಎಂದು ಮಂಧಾನ, ರೋಹಿತ್ಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರೋಹಿತ್, ಹೌದು ಅವರು ನನ್ನ ಮರೆವಿನ ವಿಚಾರವಾಗಿ ಕೀಟಲೆ ಮಾಡುತ್ತಲೇ ಇರುತ್ತಾರೆ. ಆದರೆ ಇದು ನನ್ನ ಹವ್ಯಾಸ ಅಲ್ಲ. ಪರ್ಸ್ ಮತ್ತು ಪಾಸ್‌ಪೋರ್ಟ್ ಮರೆತು ಬಂದಿದ್ದೇನೆ ಎಂದು ಛೇಡಿಸುತ್ತಾರೆ. ಆದರೆ ಇದು ಸುಳ್ಳು. ದಶಕದ ಹಿಂದೆ ನಾನು ಪಾಸ್‌ಪೋರ್ಟ್ ಮತ್ತು ವ್ಯಾಲೆಟ್ ಮರೆತು ಏರ್ಪೋಟ್ಗೆ ಹೋಗಿದ್ದೆ. ಅದೇ ವಿಚಾವಾಗಿ ಇಂದಿಗೂ ಛೇಡಿಸುತ್ತಾರೆ ಎಂದರು.
ಮತ್ತೊಂದು ಪ್ರಶ್ನೆ ಕೇಳಿದ ಸ್ಮೃತಿ, "ಈವರೆಗೂ ಅತ್ಯಂತ ಪ್ರಮುಖವಾದ ವಿಷಯವನ್ನು ಮರೆತು ಹೋಗಿದ್ದೀರಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡದ ಹಿಟ್ಮ್ಯಾನ್, ದಯವಿಟ್ಟು ನನ್ನ ಬಿಟ್ಟುಬಿಡಿ, ನನ್ನ ಪತ್ನಿ ಈ ಕಾರ್ಯಕ್ರಮ ನೋಡುತ್ತಿರುತ್ತಾಳೆ. ಹಾಗಾಗಿ ಆ ವಿಷಯವನ್ನು ನಾನು ಹೇಳಲು ಸಾಧ್ಯವಿಲ್ಲ, ನನ್ನ ಮನಸಲ್ಲೇ ಇಟ್ಟುಕೊಳ್ಳುತ್ತೇನೆ" ಎಂದು ಜಾರಿಕೊಂಡರು. ಆದರೆ, ಪತ್ನಿಗೂ ಗೊತ್ತಾಗದಂತಹ ಯಾವ ವಿಷಯವನ್ನು ರೋಹಿತ್ ಮುಚ್ಚಿಟ್ಟಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲ.
ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರೋಹಿತ್, "ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ ಶ್ರೇಷ್ಠ ಆಟಗಾರರನ್ನು ಭೇಟಿಯಾಗುವುದು ಸಂತೋಷ ತಂದಿದೆ. ಅವರೊಂದಿಗೆ ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವುದು ಒಳ್ಳೆಯದು. ಕ್ರೀಡೆಯಲ್ಲಿ ಅದ್ಭುತ ಪ್ರದರ್ಶನ ನೀಡುವ ಪ್ರತಿಯೊಬ್ಬರಿಗೂ ಪ್ರಶಸ್ತಿಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ಈ ಹಿಂದೆ ಹೈದರಾಬಾದ್‌ನಲ್ಲಿ ಇದೇ ರೀತಿಯ ಕಾರ್ಯಕ್ರಮ ನಡೆದಿದ್ದು ನನಗೆ ನೆನಪಿದೆ. ಇದನ್ನು ಈಗ ಮುಂಬೈನಲ್ಲಿ ನಡೆಸುತ್ತಿರುವುದು ವಿಷಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿರಾಟ್ ಅನುಪಸ್ಥಿತಿ: ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಭಾಗವಹಿಸಿರಲಿಲ್ಲ. ಇದು ಚರ್ಚೆಗೆ ಗ್ರಾಸವಾಗಿದೆ. ಆದರೆ ಸದ್ಯ ಕೊಹ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದು ಮೂರನೇ ದಿನದಾಟವಿದ್ದ ಕಾರಣ ಕಾರ್ಯಕ್ರಮಕ್ಕೆ ಗೈರಾದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:5ನೇ ಟಿ20: ಆಂಗ್ಲರ ವಿರುದ್ದ 13 ವರ್ಷದ ಹಳೆ ಸೇಡು ತೀರಿಸಿಕೊಳ್ಳಲು ಭಾರತ ಮಾಸ್ಟರ್ ಪ್ಲಾನ್!