ಹೈದರಾಬಾದ್: 2024 ಟೀಂ ಇಂಡಿಯಾ ಪಾಲಿಗೆ ಅದೃಷ್ಟದ ವರ್ಷ. ಏಕೆಂದರೆ, ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಪಂದ್ಯದ ಕೊನೆಯಲ್ಲಿ ಅದ್ಬುತ ಪ್ರದರ್ಶನ ತೋರಿದ ರೋಹಿತ್ ಶರ್ಮಾ ಪಡೆ, ಅಂತಿಮವಾಗಿ 7 ರನ್ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಇದರೊಂದಿಗೆ 17 ವರ್ಷಗಳ ನಂತರ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು.
ಇದೆಲ್ಲವೂ ನಡೆದು 3 ತಿಂಗಳುಗಳೇ ಕಳೆದವು. ಆದ್ರೆ ಇತ್ತೀಚೆಗೆ ರೋಹಿತ್ ಶರ್ಮಾ ಅವರು ಕಾರ್ಯಕ್ರಮವೊಂದರಲ್ಲಿ ಫೈನಲ್ ಪಂದ್ಯದಲ್ಲಿ ರಿಷಭ್ ಪಂತ್ ತೋರಿದ ಬುದ್ದಿವಂತಿಕೆ ಕೂಡ ಪಂದ್ಯದ ಗೆಲುವಿಗೆ ಕಾರಣ ಎಂದು ತಿಳಿಸಿದರು.
ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಕೊನೆಯ 30 ಎಸೆತಗಳಲ್ಲಿ 30 ರನ್‌ಗಳು ಅಗತ್ಯವಿದ್ದಾಗ ವೇಗಿಗಳಾದ ಬುಮ್ರಾ, ಹಾರ್ದಿಕ್ ಮತ್ತು ಅರ್ಷದೀಪ್ ಅದ್ಭುತ ಬೌಲಿಂಗ್ ಮಾಡಿದ್ದರು. ಬುಮ್ರಾ ರನ್ ನೀಡುವುದನ್ನು ನಿರ್ಬಂಧಿಸಿದರೆ, ಹಾರ್ದಿಕ್ ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಿಸಿದರು. ಆದರೆ, ಅವರ ಜೊತೆಗೆ ತಂಡದ ಯಶಸ್ಸಿಗೆ ಮತ್ತೊಂದು ಬಲವಾದ ಕಾರಣವಿದೆ ಎಂದು ಶರ್ಮಾ ಬಹಿರಂಗಪಡಿಸಿದ್ದಾರೆ. ಪಂದ್ಯದ ಮೇಲಿನ ಭರವಸೆಗಳು ಕ್ಷೀಣಿಸುತ್ತಿರುವಾಗ ವಿಕೆಟ್‌ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ಅವರ ಬುದ್ಧಿವಂತಿಕೆ ಪಂದ್ಯದ ಗತಿ ಬದಲಿಸಿತು ಎಂದರು.