ನವದೆಹಲಿ: ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ಶನಿವಾರ ಶಿಖರ್ ಧವನ್ ನಿವೃತ್ತಿ ಘೋಷಿಸಿರುವ ಕುರಿತು ಭಾರತೀಯ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್, ಈ ಎಡಗೈ ಬ್ಯಾಟ್ಸ್‌ಮನ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ರೋಹಿತ್ ಮತ್ತು ಧವನ್ ಆರಂಭಿಕ ಜೋಡಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಮತ್ತು ಹೊರಗಿನ ವ್ಯಕ್ತಿತ್ವಕ್ಕಾಗಿ ಧವನ್ ಅವರನ್ನು ರೋಹಿತ್ 'ದಿ ಅಲ್ಟಿಮೇಟ್ ಜಟ್' ಎಂದು ಕರೆದಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತ ತಂಡದಲ್ಲಿ ಧವನ್‌ರೊಂದಿಗೆ ಕಳೆದ ಅಪರೂಪದ ಕ್ಷಣಗಳು ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಧವನ್ ಜೊತೆಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡ ಹಿಟ್ಮ್ಯಾನ್, 'ಕೊಠಡಿಗಳಿಂದ ಹಿಡಿದು ಮೈದಾನದಲ್ಲಿ ಜೀವಮಾನದ ನೆನಪುಗಳನ್ನು ಹಂಚಿಕೊಳ್ಳುವವರೆಗೆ. ನೀವು ಯಾವಾಗಲೂ ಇನ್ನೊಂದು ತುದಿಯಲ್ಲಿ ನನ್ನ ಕೆಲಸವನ್ನು ಸುಲಭಗೊಳಿಸಿದ್ದೀರಿ. ಅಲ್ಟಿಮೇಟ್ ವ್ಯಕ್ತಿ' ಎಂದು ಬರೆದಿದ್ದಾರೆ.
ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಒಟ್ಟು 117 ಪಂದ್ಯಗಳಲ್ಲಿ ಆರಂಭಿಕರಾಗಿ ಬ್ಯಾಟ್ ಮಾಡಿದ್ದಾರೆ. ಈ ಅವಧಿಯಲ್ಲಿ ಅವರ ಪಾಲುದಾರಿಕೆಯೆಲ್ಲಿ 18 ಶತಕಗಳು ಮತ್ತು 15 ಅರ್ಧ ಶತಕಗಳನ್ನು ಒಳಗೊಂಡಂತೆ 5193 ರನ್ ಹರಿದು ಬಂದಿವೆ. 2018ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 210 ರನ್ ಜೊತೆಯಾಟವಾಡಿದ್ದರು. ಇದು ಈವರೆಗಿನ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ. ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ ಮತ್ತು ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ನಂತರ ರೋಹಿತ್ ಮತ್ತು ಧವನ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಅತ್ಯಂತ ಯಶಸ್ವಿ ಬ್ಯಾಟಿಂಗ್ ಜೋಡಿಯಾಗಿದೆ.
2013ರ ಚಾಂಪಿಯನ್ಸ್‌ನಲ್ಲೂ ಇಬ್ಬರೂ ಅಮೋಘ ಓಪನಿಂಗ್ ನೀಡುವ ಮೂಲಕ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಈ ಇಬ್ಬರ ಪಾತ್ರವೂ ಪ್ರಮುಖವಾಗಿದೆ. ಇದಲ್ಲದೇ 2015ರ ಏಕದಿನ ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿ ಹಾಗೂ 2019ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಇಬ್ಬರೂ ಉತ್ತಮ ಆರಂಭ ನೀಡಿದ್ದರು.
ಧವನ್ ಕ್ರಿಕೆಟ್ ಜರ್ನಿ:ಶಿಖರ್ ಧವನ್ 2010 ರಿಂದ 2022ರವರೆಗೆ ಭಾರತ ತಂಡವನ್ನು ಪ್ರನಿಧಿಸಿದ್ದಾರೆ. 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿರುವ ಧವನ್, 34 ಟೆಸ್ಟ್, 167 ಏಕದಿನ, 68 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಟೆಸ್ಟ್ನಲ್ಲಿ 2315 ರನ್ ಗಳಿಸಿದ್ದರೇ, ಏಕದಿನ ಪಂದ್ಯದಲ್ಲಿ 6793 ರನ್, ಟಿ20ಯಲ್ಲಿ 1759 ರನ್ಗಳನ್ನು ದಾಖಲಾಗಿವೆ.
ಇದನ್ನೂ ಓದಿ:ಐಪಿಎಲ್ಗೆ ಕಮ್ಬ್ಯಾಕ್ ಮಾಡ್ತಾರಾ 'ಸಿಕ್ಸರ್ ಕಿಂಗ್' ಯುವರಾಜ್ ಸಿಂಗ್, ಯಾವ ತಂಡಕ್ಕೆ ಗೊತ್ತಾ? - Yuvraj Singh Return to IPL