India WTC Final Scenario: ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ಗೆಲುವು ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ಗೆ ಪ್ರವೇಶ ಪಡೆದಿದೆ.
ಈ ಪಂದ್ಯದಲ್ಲಿ 148 ರನ್‌ಗಳ ಕಡಿಮೆ ಮೊತ್ತದ ಗುರಿಯನ್ನು ಪಡೆದಿದ್ದ ದಕ್ಷಿಣ ಆಫ್ರಿಕಾ 99 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಮಾರ್ಕೊ ಜಾನ್ಸೆನ್ ಮತ್ತು ಕಗಿಸೊ ರಬಾಡ 51 ರನ್‌ಗಳ ಅಜೇಯ ಜೊತೆಯಾಟ ಆಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
𝙁𝙄𝙍𝙎𝙏 𝙁𝙄𝙉𝘼𝙇𝙄𝙎𝙏 𝘾𝙊𝙉𝙁𝙄𝙍𝙈𝙀𝘿 🇿🇦
— ICC (@ICC) December 29, 2024
South Africa are headed to Lord's for the #WTC25 Final 🤩 #SAvPAK ➡ https://t.co/vWLh4MSQjm pic.twitter.com/sZ5QBnDAYD
ರಬಾಡ 31 ಮತ್ತು ಜಾನ್ಸೆನ್ 16 ರನ್ ಗಳಿಸಿ ಅಜೇಯವಾಗಿ ಉಳಿದರು. ಪಾಕ್ ಪರ ಮೊಹಮ್ಮದ್ ಅಬ್ಬಾಸ್ ಆರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಂಡಕ್ಕೆ ಜಯ ತಂದುಕೊಡಲು ಪ್ರಯತ್ನಿಸಿದರಾದರೂ, ಜಾನ್ಸೆನ್-ರಬಾಡ ಅವರ ಜೋಡಿ ಪಾಕ್ನಿಂದ ಗೆಲುವು ಕಸಿದುಕೊಂಡಿತು. ಇದರೊಂದಿಗೆ ಪ್ರಸ್ತುತ ಋತುವಿನಲ್ಲಿ WTC ಫೈನಲ್ ತಲುಪಿದ ಮೊದಲ ತಂಡವಾಗಿ ದ.ಆಫ್ರಿಕಾ ಸಾಧನೆ ಮಾಡಿತು.
ಪಂದ್ಯದ ಹೈಲೈಟ್: ಸೆಂಚುರಿಯನ್ನ ಸೂಪರ್ ಸ್ಪೋರ್ಟ್ ಪಾರ್ಕ್ನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಬಂದ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 211 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 237 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 301 ರನ್ ಎರಡನೇ ಇನ್ನಿಂಗ್ಸ್‌ನಲ್ಲಿ 150 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ದ.ಆಫ್ರಿಕಾ ಪರ ಏಡನ್ ಮರ್ಕ್ರಾಮ್ ಉತ್ತಮ ಪ್ರದರ್ಶನ ತೋರಿದರು.
WTC ಫೈನಲ್ಗೆ ದಕ್ಷಿಣ ಆಫ್ರಿಕಾ ಎಂಟ್ರಿ; ಪ್ರಸ್ತುತ WTC ಋತುವಿನಲ್ಲಿ ದಕ್ಷಿಣ ಆಫ್ರಿಕಾ ಈವರೆಗೆ 11 ಟೆಸ್ಟ್ ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಸಾಧಿಸಿ, ಮೂರರಲ್ಲಿ ಸೋತಿದೆ. ದಕ್ಷಿಣ ಆಫ್ರಿಕಾದ ಒಂದು ಪಂದ್ಯ ಡ್ರಾ ಆಗಿದ್ದು, ಗೆಲುವಿನ ಶೇಕಡಾವಾರು 66.67ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಟೆಂಬಾ ಬವುಮಾ ನೇತೃತ್ವದ ಹರಿಣಗಳ ಪಡೆ WTC ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಭಾರತ WTC ಫೈನಲ್ ತಲುಪುವುದು ಹೇಗೆ?
- ಟೀಂ ಇಂಡಿಯಾ WTC ಫೈನಲ್ ನೇರವಾಗಿ ಅರ್ಹತೆ ಪಡೆಯಬೇಕಾದ್ರೆ ಆಸ್ಟ್ರೇಲಿಯಾ ವಿರುದ್ಧ ಉಳಿದ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲಲೇಬೇಕು. ಆದಾಗ್ಯೂ, ಉಳಿದ ಎರಡು ಟೆಸ್ಟ್ಗಳಲ್ಲಿ ಒಂದನ್ನು ಮಾತ್ರ ಗೆದ್ದು, ಇನ್ನೊಂದು ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಫೈನಲ್ಗೆ ಅರ್ಹತೆ ಪಡೆಯಲು ಶ್ರೀಲಂಕಾ ತಂಡದ ಮೇಲೆ ಅವಲಂಭಿಸಬೇಕಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಲಂಕನ್ನರು ಕನಿಷ್ಠ ಒಂದು ಪಂದ್ಯವನ್ನಾದರೂ ಡ್ರಾ ಮಾಡಿಕೊಳ್ಳಬೇಕಾಗುತ್ತದೆ.
- ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧ ಉಳಿದಿರುವ ಎರಡೂ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡರೆ, ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಿಂದ ಸೋಲನುಭವಿಸಬೇಕು. ಆಗ ಭಾರತ ಫೈನಲ್ಗೆ ತಲುಪುವ ಅವಕಾಶ ಇರುತ್ತದೆ. ಉಳಿದ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನ್ನು ಕಂಡರೆ WTC ಫೈನಲ್ ರೇಸ್‌ನಿಂದ ಹೊರಬೀಳಲಿದೆ.
ಇದನ್ನೂ ಓದಿ: ಟೆಸ್ಟ್ ವಿಕೆಟ್ ಕಬಳಿಕೆಯಲ್ಲಿ ಬುಮ್ರಾ ಡಬಲ್ ಸೆಂಚುರಿ!: 32 ವರ್ಷದ ಹಳೆ ದಾಖಲೆ ಪೀಸ್ ಪೀಸ್