ಬೆಂಗಳೂರು: ಜನವರಿ 15ರಂದು ಸಿಎಂ ಸಿದ್ದರಾಮಯ್ಯ ರಸ್ತೆ ಸಾರಿಗೆ ನೌಕರರ ಜೊತೆ ಸಭೆ ನಡೆಸುವ ಭರವಸೆ ನೀಡಿದ್ದು, ಡಿ.31ರಿಂದ ಮಾಡಲು ಉದ್ದೇಶಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿಯಲು ಕೆಎಸ್ಆರ್ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಭೆ ನಡೆಸಿದ ಬೆನ್ನಲ್ಲೇ ಕ್ರಿಯಾ ಸಮಿತಿ ಮುಷ್ಕರದಿಂದ ಹಿಂದೆ ಸರಿಯಲು ತೀರ್ಮಾನಿಸಿದೆ. ಸಭೆಯಲ್ಲಿ ಮಕರ ಸಂಕ್ರಾಂತಿಯಂದು ಸಭೆ ನಡೆಸಿ ರಸ್ತೆ ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷ ಅನಂತ ಸುಬ್ಬಾರಾವ್ "ಮುಷ್ಕರ ವಾಪಾಸ್ ಪಡೆಯಲು ತೀರ್ಮಾನಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜ.15 ರಂದು ಸಾರಿಗೆ ನೌಕರರ ಒಕ್ಕೂಟದ ಜೊತೆ ಸಭೆ ನಡೆಸುವ ಭರವಸೆ ನೀಡಿದ್ದಾರೆ. ಆ ಸಭೆಯಲ್ಲಿ ಎಲ್ಲ ಬೇಡಿಕೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಲಾಗುವುದು. ಹೀಗಾಗಿ ಮುಷ್ಕರ ಕೈಬಿಡುವಂತೆ ಸಚಿವ ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ. ಹಾಗಾಗಿ ಡಿ.31 ರಿಂದ ಮಾಡಲು ಉದ್ದೇಶಿಸಿದ್ದ ಮುಷ್ಕರವನ್ನು ಸದ್ಯ ಕೈ ಬಿಡಲು ತೀರ್ಮಾನಿಸಲಾಗಿದೆ" ಎಂದು ತಿಳಿಸಿದರು.
ಬಾಕಿ ವೇತನ ಪಾವತಿ ಹಾಗೂ ವೇತನ ಪರಿಷ್ಕರಣೆ ಸೇರಿ ಹಲವು ಬೇಡಿಕೆಗಳನ್ನು ನೌಕರರ ಕ್ರಿಯಾ ಸಮಿತಿ ಮುಂದಿಟ್ಟಿದೆ.
ಭಾನುವಾರ ನಡೆದ ಸಿಎಂ ನೇತೃತ್ವದ ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, "ನಮ್ಮ ಕಾರ್ಪೊರೇಷನ್ ಆರ್ಥಿಕ ಪರಿಸ್ಥಿತಿ ಅವರಿಗೂ ಗೊತ್ತಿದೆ. ಹಿಂದೆ ಬಿಜೆಪಿ ಇದ್ದಾಗ 900 ಕೋಟಿ ಸಾಲ ಇಟ್ಟು ಹೋಗಿದ್ದಾರೆ. ಹೊಸ ನೇಮಕಾತಿ, ನೌಕರರ ವೇತನ ಅನೇಕ ಕಾರ್ಯಕ್ರಮ ಎಲ್ಲರಿಗೂ ಗೊತ್ತಿದೆ. ಸಂಘಟನೆಯವರು ನೌಕರರ ಪರವಾಗಿ ಕೆಲಸ ಮಾಡಿದ್ದಾರೆ. ನಾನೂ ಕೂಡ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. 220 ಕೋಟಿ ರೂ. ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೇನೆ".
"ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಇಟ್ಟಿದ್ದೇವೆ. ವೇತನ ಪರಿಷ್ಕರಣೆ ಕೂಡ ಹೇಳಿದ್ದೇವೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಸಮಾನ ವೇತನ ಬಗ್ಗೆ ಹೇಳಿದ್ದೇವೆ. ಬಸ್ ನಿಲ್ಲಿಸುತ್ತೇವೆ ಅಂತ ಹೇಳಿದ್ದಾರೆ. ಅದನ್ನ ಮುಂದೂಡಿ ಅಂತ ಮನವಿ ಮಾಡಿದ್ದೇವೆ. ನಾವಂತೂ ರಸ್ತೆ ಸಾರಿಗೆ ನೌಕರರ ಪರವಾಗಿ ಪಾಸಿಟೀವ್ ಆಗಿದ್ದೇವೆ" ಎಂದಿದ್ದಾರೆ.
ಇದನ್ನೂ ಓದಿ: ಡಿ.31ರಿಂದ ಸಾರಿಗೆ ನೌಕರರ ಮುಷ್ಕರ: ಕಾರ್ಮಿಕ ಇಲಾಖೆ ಆಯುಕ್ತರ ಜೊತೆ ನಾಳೆ ಸಭೆ