ನ್ಯೂಯಾರ್ಕ್: ಭಾರತದ ಗ್ರ್ಯಾಂಡ್‌ಮಾಸ್ಟರ್ ಕೊನೇರು ಹಂಪಿ ಅವರು ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸಿ ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 37 ವರ್ಷದ ಕೊನೇರು ಹಂಪಿ ಅವರು ಚೀನಾದ ಜು ವೆನ್ಜುನ್ ಬಳಿಕ ಮಹಿಳೆಯರ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಎರಡನೇ ಚೆಸ್ ಆಟಗಾರ್ತಿಯಾಗಿದ್ದಾರೆ.
ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆದ ಪಂದ್ಯಾವಳಿಯ ಫೈನಲ್ನಲ್ಲಿ 11 ಅಂಕಗಳಲ್ಲಿ 8.5 ಅಂಕಗಳನ್ನು ಕಲೆ ಹಾಕುವ ಮೂಲಕ ಅಗ್ರಸ್ಥಾನ ಗಳಿಸಿದರು. 2019ರಲ್ಲಿ ಜಾರ್ಜಿಯಾದಲ್ಲಿ ನಡೆದ ಟೂರ್ನಿಯಲ್ಲೂ ಕೊನೇರು ಅವರು ಪ್ರಶಸ್ತಿ ಗೆದ್ದಿದ್ದರು. ಅದರ ನಂತರ ಇದು ಅವರ ಎರಡನೇ ಗೆಲುವಾಗಿದೆ.
👏 Congratulations to 🇮🇳 Humpy Koneru, the 2024 FIDE Women’s World Rapid Champion! 🏆#RapidBlitz #WomenInChess pic.twitter.com/CCg3nrtZAV
— International Chess Federation (@FIDE_chess) December 28, 2024
ಪುರುಷರ ವಿಭಾಗದಲ್ಲಿ ರಷ್ಯಾದ 18 ವರ್ಷದ ವೊಲೊಡರ್ ಮುರ್ಜಿನ್ ಪ್ರಶಸ್ತಿ ಗೆದ್ದರು. 17ನೇ ವಯಸ್ಸಿಗೆ ಚಾಂಪಿಯನ್ಶಿಪ್ ಕಿರೀಟ ತಮ್ಮದಾಗಿಸಿಕೊಂಡಿರುವ ನೋಡರ್ಬೆಕ್ ಅಬ್ದುಸಟ್ಟೊರೊವ್ ನಂತರ ವೊಲೊಡರ್ ಮುರ್ಜಿನ್ ಎರಡನೇ ಕಿರಿಯ FIDE ವಿಶ್ವ ರ‍್ಯಾಪಿಡ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಚೆಸ್ನಲ್ಲಿ ಭಾರತ ಮೈಲಿಗಲ್ಲು: ಭಾರತದ ಮಟ್ಟಕ್ಕೆ ಕೊನೇರು ಹಂಪಿ ಅವರ ಈ ಗೆಲುವು ಚೆಸ್ನಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ. ಡಿಂಗ್ ಲಿರೆನ್ ಅವರನ್ನು ಸೋಲಿಸಿ, ಭಾರತದ ಡಿ.ಗುಕೇಶ್ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ ಎರಡು ವಾರದಲ್ಲಿ ಕೊನೇರು ಹಂಪಿ ಅವರು ಚಾಂಪಿಯನ್ ಪಟ್ಟ ಅಲಂಕರಿಸಿರುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಡಿ.ಗುಕೇಶ್ ಅವರು, ವಿಶ್ವನಾಥನ್ ಆನಂದ್ ಬಳಿಕ ಟೂರ್ನಮೆಂಟ್ ಗೆದ್ದ ಎರಡನೇ ಭಾರತೀಯರಾಗಿದ್ದಾರೆ. ಜೊತೆಗೆ ವಿಶ್ವ ಚೆಸ್ ಚಾಂಪಿಯನ್ ಕಿರೀಟ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Congratulations to the winners of the 2024 FIDE Women's World Championship! 👏
— International Chess Federation (@FIDE_chess) December 28, 2024
🥇Humpy Koneru
🥈Ju Wenjun
🥉Kateryna Lagno#RapidBlitz #WomenInChess pic.twitter.com/TJ77lzIp7O
ಕೊನೇರು ಹಂಪಿ ಅವರು ಮೊದಲ ಬಾರಿಗೆ ಮಾಸ್ಕೋದಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ 2012 ರ ಆವೃತ್ತಿಯ ಪಂದ್ಯಾವಳಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಅದಾದ ಬಳಿಕ 2019ರಲ್ಲಿ ಅವರು ಜಾರ್ಜಿಯಾದ ಬಟುಮಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಭಾರತೀಯ ಗ್ರ್ಯಾಂಡ್‌ಮಾಸ್ಟರ್ 2023ರ ಆವೃತ್ತಿಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಈ ಸಾಧನೆಗಳ ಹೊರತಾಗಿ, ಕೊನೇರು ಹಂಪಿ ಅವರು 2022ರ ಮಹಿಳಾ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಮತ್ತು 2024ರಲ್ಲಿ ಮಹಿಳಾ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚದುರಂಗದಾಟಕ್ಕೆ ಭಾರತದ ಗುಕೇಶ್ ಬಾಸ್: 'ವಿಶ್ವ ಚೆಸ್ ಚಾಂಪಿಯನ್' ಗೆದ್ದ ಅತಿ ಕಿರಿಯ ಆಟಗಾರ