ಹೈದರಾಬಾದ್: ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕಳೆದುಕೊಂಡಿದೆ. 92 ವರ್ಷಗಳ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ಆಗಿದೆ. ಇದರ ಬೆನ್ನಲ್ಲೇ ಹಿರಿಯ ಆಟಗಾರರ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾ ಹೇಳಿಕೊಳ್ಳುವ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಈ ವೈಫಲ್ಯಕ್ಕೆ ಕಾರಣ ದುಲೀಪ್ ಟ್ರೋಫಿ ಆಡದೇ ಇರುವುದು ಎನ್ನಲಾಗುತ್ತಿದೆ.
ದುಲೀಪ್ ಟ್ರೋಫಿ ನಿರಾಕರಿಸಿದ ಹಿರಿಯ ಆಟಗಾರರು: ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು ಮತ್ತು ಅನಂತಪುರದಲ್ಲಿ ದುಲೀಪ್ ಟ್ರೋಫಿ ನಡೆದಿತ್ತು. ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರೂ ಈ ಸರಣಿಯಲ್ಲಿ ಆಡಿದ್ದರು. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮಾತ್ರ ಆಡಿರಲಿಲ್ಲ. ಈ ಮೂವರಿಗೆ ದುಲೀಪ್ ಟ್ರೋಫಿ ಆಡುವಂತೆ ಬಿಸಿಸಿಐ ಕೂಡ ತಿಳಿಸಿತ್ತು. ಸರಣಿ ಆರಂಭಕ್ಕೂ ಮುನ್ನ ದುಲೀಪ್ ಟ್ರೋಫಿ ಆಡುವುದಾಗಿ ಒಪ್ಪಿಕೊಂಡಿದ್ದ ವಿರಾಟ್, ರೋಹಿತ್, ಅಶ್ವಿನ್ ನಂತರ ಸರಣಿ ಆರಂಭವಾದ ವೇಳೆ ವಿಶ್ರಾಂತಿ ಪಡೆಯುವುದಾಗಿ ಹೇಳಿ ಆಡಲು ನಿರಾಕರಿಸಿದರು.
ಇದರಿಂದಾಗಿ ಸರಿಯಾದ ಅಭ್ಯಾಸವಿಲ್ಲದೆ ಹಿರಿಯ ಆಟಗಾರರು ನೇರವಾಗಿ ಕಿವೀಸ್ ವಿರುದ್ಧ ಸರಣಿಗಿಳಿದು ವಿಫಲರಾಗಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಆಡಿದ್ದರೇ ಈ ಪರಿಸ್ಥಿತಿ ಬರ್ತಿರಲಿಲ್ಲ ಎಂದು ಕ್ರಿಕೆಟ್ ಪಂಡಿತರು ಟೀಕಿಸಿದ್ದಾರೆ. ಯಾವುದೇ ಸರಣಿ ಮುಗಿದ ನಂತರ ವಿರಾಮ ಪಡೆದ ಮೇಲೆ ಮುಂದಿನ ಪಂದ್ಯಗಳಿಗಾಗಿ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗುವುದು ಉತ್ತಮ ಎಂದಿದ್ದಾರೆ.