ರಾಜ್ಕೋಟ್(ಗುಜರಾತ್):ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ಇಂದಿನಿಂದ ಆರಂಭವಾಗಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದೆ. ಇಂಗ್ಲೆಂಡ್ ಬೌಲರ್ಗಳೊಡ್ಡಿದ ಆರಂಭಿಕ ಆಘಾತವನ್ನು ಭಾರತದ ಬ್ಯಾಟರ್‌ಗಳು ಮೆಟ್ಟಿನಿಂತರು. ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಅವರ ಭರ್ಜರಿ ಶತಕ ಹಾಗೂ ಪಾದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್ ಖಾನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸುವತ್ತ ದಿಟ್ಟ ಹೋರಾಟ ನಡೆಸಿದೆ. ತಂಡ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿದೆ. ನಾಳೆಗೆ (ಶುಕ್ರವಾರ) ಶತಕವೀರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿವೆ. ಇದೀಗ ಮೂರನೇ ಪಂದ್ಯ ಗೆದ್ದು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳುವತ್ತ ಎರಡೂ ತಂಡಗಳು ತಮ್ಮ ಚಿತ್ತ ನೆಟ್ಟಿವೆ.
ಇಂದು ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಮಾರಕ ಬೌಲಿಂಗ್ ಎದುರಿಸುವಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾದರು. ಕಳೆದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ (10) ಮತ್ತು ಶುಭಮನ್ ಗಿಲ್ (0) ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್ ಸೇರಿದರು. ಇಬ್ಬರನ್ನು ಮಾರ್ಕ್ ವುಡ್ ಔಟ್ ಮಾಡುವಲ್ಲಿ ಯಶ ಕಂಡರು.
ರೋಹಿತ್ ಶರ್ಮಾ, ಜಡೇಜಾ ಶತಕದ ಸೊಗಸು: ಮತ್ತೊಂದೆಡೆ, ಎಡಗೈ ಸ್ಪಿನ್ನರ್ ಟಾಮ್ ಹಾರ್ಟ್ಲಿ ಅವರಿಗೆ ರಜತ್ ಪಾಟಿದಾರ್ (5) ವಿಕೆಟ್ ಒಪ್ಪಿಸಿದರು. ಹೀಗಾಗಿ 9 ಓವರ್ಗಳಲ್ಲಿ ಕೇವಲ 33 ರನ್ಗಳಿಗೆ ಪ್ರಮುಖ ಮೂರು ವಿಕೆಟ್ಗಳನ್ನು ಟೀಂ ಇಂಡಿಯಾ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ನಡುವೆ ರೋಹಿತ್ ಶರ್ಮಾ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಒಂದಾಗಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ನಾಲ್ಕನೇ ವಿಕೆಟ್ಗೆ 329 ಎಸೆತಗಳನ್ನು ಎದುರಿಸಿ 204 ರನ್ಗಳ ಭರ್ಜರಿ ಜೊತೆಯಾಟ ನೀಡಿದರು. 27 ರನ್ ಗಳಿಸಿದ್ದಾಗ ಜೋ ರೂಟ್ ಅವರಿಂದ ಜೀವದಾನ ಪಡೆದ ರೋಹಿತ್, ಅದರ ಪರಿಪೂರ್ಣ ಲಾಭ ಗಳಿಸಿದರು. ಅಲ್ಲದೇ, ಟೆಸ್ಟ್ ಕ್ರಿಕೆಟ್ನ 11ನೇ ಶತಕ ಬಾರಿಸಿದರು. ಒಟ್ಟಾರೆ 196 ಎಸೆತಗಳಲ್ಲಿ 14 ಬೌಂಡರಿ, ಮೂರು ಸಿಕ್ಸರ್‌ಸಮೇತ 131 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಪಾದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್ ಅಬ್ಬರ: ಮತ್ತೊಂದೆಡೆ, 5ನೇ ಸ್ಥಾನಕ್ಕೆ ಬಡ್ತಿ ಪಡೆದು ಬಂದ ರವೀಂದ್ರ ಜಡೇಜಾ ಸಹ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶಿಸಿ ತಮ್ಮ ಮೂರನೇ ಶತಕ ದಾಖಲಿಸಿದರು. ದಿನದಾಟ ಅಂತ್ಯಕ್ಕೆ ಜಡೇಜಾ 212 ಎಸೆತಗಳಲ್ಲಿ 110 ರನ್ ಗಳಿಸಿ ಅಜೇಯರಾಗುಳಿದ್ದಾರೆ. ರೋಹಿತ್ ನಂತರ ಬ್ಯಾಟಿಂಗ್ ಬಂದ ಸರ್ಫರಾಜ್ ಖಾನ್ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ಬಿರುಸಿನ ಬ್ಯಾಟಿಂಗ್ ಮಾಡಿದರು. 48 ಎಸೆತಗಳಲ್ಲಿ 50 ರನ್ಗಳ ಗಡಿ ದಾಟಿದ ಸರ್ಫರಾಜ್, ತಮ್ಮ ಸ್ಕೋರ್ 62 ಆಗಿದ್ದಾಗ ರನೌಟ್ ಆಗಿ ಇನ್ನಿಂಗ್ಸ್ ಮುಗಿಸಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ ಮೂರು ವಿಕೆಟ್ ಪಡೆದರೆ, ಟಾಮ್ ಹಾರ್ಟ್ಲಿ ಒಂದು ವಿಕೆಟ್ ಪಡೆದರು.