ಮೆಲ್ಬೋರ್ನ್:ಭಾರತದ ಅನುಭವಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ನಲ್ಲಿ ಜೆಕ್ - ಚೀನಾದ ಜಾಂಗ್ ಝಿಝೆನ್ ಮತ್ತು ಥಾಮಸ್ ಮ್ಯಾಸೆಕ್ ಅವರನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿದೆ. ರಾಡ್ ಲೇವರ್ ಅರೆನಾದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ಇಂಡೋ - ಆಸ್ಟ್ರೇಲಿಯನ್ ಜೋಡಿ ಜಾಂಗ್ ಝಿಝೆನ್ ಮತ್ತು ಥಾಮಸ್ ಮ್ಯಾಸೆಕ್ ಅವರನ್ನು 6-3, 3-6, 7-6 (10-7) ಸೆಟ್ ಗಳಿಂದ ಸೋಲಿಸಿತು.
ಬೋಪಣ್ಣ ಮತ್ತು ಎಬ್ಡೆನ್ ಜೋಡಿಯಾಗಿ ಸತತ ಎರಡನೇ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದಾರೆ. ಭಾರತದ 43ರ ಹರೆಯದ ರೋಹನ್ ಬೋಪಣ್ಣ ಇದೇ ಪ್ರಥಮ ಬಾರಿಗೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ನಲ್ಲಿ ಫೈನಲ್ ತಲುಪಿದ್ದಾರೆ. ಅವರು ಈ ಹಿಂದೆ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ನಲ್ಲಿ ಯಾವತ್ತೂ ಮೂರನೇ ಸುತ್ತು ದಾಟಿರಲಿಲ್ಲ.
ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ ಮತ್ತು ಎಬ್ಡೆನ್ 6-4, 7-6 (7-5) ಸೆಟ್ಗಳಿಂದ ಅರ್ಜೆಂಟೀನಾದ ಆರನೇ ಶ್ರೇಯಾಂಕದ ಮ್ಯಾಕ್ಸಿಮೊ ಗೊನ್ಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ವಿರುದ್ಧ ಜಯ ಸಾಧಿಸಿದ್ದರು. ಒಲಿಂಪಿಕ್ ಕಂಚಿನ ಪದಕ ವಿಜೇತರಾದ ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ನಂತರ ಡಬಲ್ಸ್ನಲ್ಲಿ ವಿಶ್ವದ ನಂ.1 ಸ್ಥಾನವನ್ನು ತಲುಪಿದ ನಾಲ್ಕನೇ ಭಾರತೀಯ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ರೋಹನ್ ಬೋಪಣ್ಣ ಪಾತ್ರರಾಗಲಿದ್ದಾರೆ. ಕಳೆದ ವರ್ಷ ಬೋಪಣ್ಣ ಮತ್ತು ಎಬ್ಡೆನ್ ಅಮೆರಿಕ ಓಪನ್ ಫೈನಲ್ ತಲುಪಿದಾಗ ಓಪನ್ ಮಾದರಿಯ ಕ್ರೀಡೆಯಲ್ಲಿ ಗ್ರ್ಯಾಂಡ್ ಸ್ಲಾಮ್ ಫೈನಲ್ಗೆ ಅರ್ಹತೆ ಪಡೆದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಬೋಪಣ್ಣ ಪಾತ್ರರಾಗಿದ್ದಾರೆ. ಕಳೆದ ವರ್ಷ ತಮ್ಮ 43ನೇ ವಯಸ್ಸಿನಲ್ಲಿ ಎಬ್ಡೆನ್ ಅವರೊಂದಿಗೆ ಇಂಡಿಯನಾ ವೆಲ್ಸ್ ನಲ್ಲಿ ಅವರು ಈ ಗೆಲುವು ಸಾಧಿಸಿದ್ದರು. ಬೋಪಣ್ಣ ಎಟಿಪಿ ಶ್ರೇಯಾಂಕದಲ್ಲಿ ವಿಶ್ವದ ಅತ್ಯಂತ ಹಿರಿಯ ನಂ.1 ಆಟಗಾರನಾಗುತ್ತಿದ್ದಂತೆ, ಅವರ ದೀರ್ಘಕಾಲದ ಸ್ನೇಹಿತೆ ಮತ್ತು ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಮನಾರ್ಹ ಸಾಧನೆಗಾಗಿ ಅವರನ್ನು ಅಭಿನಂದಿಸಿದರು. "ನೀವು ಇದನ್ನು ಮಾಡಿ ತೋರಿಸಿದ್ದೀರಿ. ತುಂಬಾ ಹೆಮ್ಮೆಯಾಗುತ್ತಿದೆ." ಎಂದು ಸಾನಿಯಾ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ. ಇದರ ಜೊತೆಗೆ ತಾವು ಹಾಗೂ ಬೋಪಣ್ಣ ಜೊತೆಗೆ ಆಟವಾಡುತ್ತಿರುವ ಚಿತ್ರವೊಂದನ್ನು ಅವರು ಶೇರ್ ಮಾಡಿದ್ದಾರೆ.
ಇದನ್ನೂ ಓದಿ :'ನಾನು ನಿವೃತ್ತಿ ಘೋಷಿಸಿಲ್ಲ': ಬಾಕ್ಸರ್ ಮೇರಿ ಕೋಮ್ ಸ್ಪಷ್ಟನೆ