ಹೈದರಾಬಾದ್:ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ಮತ್ತು ವಿಕೆಟ್‌ಕೀಪರ್ ರಿಷಭ್ ಪಂತ್ ಅವರು ಕಾರು ಅಪಘಾತಕ್ಕೊಳಗಾಗಿ ವರ್ಷ ಕಳೆದಿದೆ. ಡಿಸೆಂಬರ್ 2022ರಿಂದ ಈವರೆಗೆ ಎಲ್ಲಿಯೂ ಅಪಘಾತದ ಬಗ್ಗೆ ಮಾತನಾಡದ ಪಂತ್ ಇದೀಗ ಮೌನ ಮುರಿದಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪ್ರಸ್ತುತಪಡಿಸುತ್ತಿರುವ 'ಬಿಲೀವ್' ಎಂಬ ಸೀರಿಸ್ನಲ್ಲಿ ಅಪಘಾತದ ನೋವಿನ ಕ್ಷಣಗಳನ್ನು ನೆನೆದು ಪಂತ್ ಭಾವುಕರಾದರು.
ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಮಾತನಾಡಿರುವ ಪಂತ್, "ಅಪಘಾತ ಸಂಭವಿಸಿದಾಗ ಈ ಜಗತ್ತಿನಲ್ಲಿ ನನ್ನ ಸಮಯ ಮುಗಿಯಿತು ಎಂದು ಭಾವಿಸಿದೆ. ನನಗೆ ಗಾಯಗಳ ಬಗ್ಗೆ ಅರಿವಿತ್ತು. ಅಪಘಾತದ ನಂತರ ನಾನು ಜೀವಂತವಾಗಿರುವುದು ಮತ್ತು ಎರಡನೇ ಜೀವನ ಸಿಕ್ಕಿದ್ದು ನನ್ನ ಅದೃಷ್ಟ. ಎಲ್ಲರಿಗೂ ಎರಡನೇ ಜೀವನ ಸಿಗಲಾರದು. ನನ್ನನ್ನು ಅದೇನೋ ರಕ್ಷಿಸಿತು" ಎಂದರು.
"ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ನಾನು ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ವೈದ್ಯರನ್ನು ಕೇಳಿದ್ದೆ. ಅವರು 16ರಿಂದ 18 ತಿಂಗಳು ಬೇಕಾಗಬಹುದು ಎಂದು ಹೇಳಿದ್ದರು. ಈ ಚೇತರಿಕೆಯ ಸಮಯವನ್ನು ಕಡಿತಗೊಳಿಸಲು ಕಷ್ಟಪಟ್ಟು ಅಭ್ಯಾಸ ಮಾಡಬೇಕೆಂದು ನಿರ್ಧಾರ ಮಾಡಿದೆ" ಎಂದು ಹೇಳಿದರು.
ಭೀಕರ ಅಪಘಾತ:2022ರ ಡಿಸೆಂಬರ್ 31ರ ರಾತ್ರಿ ತನ್ನ ತಾಯಿಗೆ ಹೊಸ ವರ್ಷದ ಸರ್ಪ್ರೈಸ್ ನೀಡಲು ರಿಷಬ್ ಪಂತ್ ದೆಹಲಿಯಿಂದ ತಮ್ಮ ನಿವಾಸವಿರುವ ಉತ್ತರಾಖಂಡದ ರೂರ್ಕಿಗೆ ತೆರಳುತ್ತಿದ್ದರು. ಏಕಾಂಗಿಯಾಗಿ ಕಾರು ಚಲಾಯಿಸಿಕೊಂಡು ಬೆಳಗಿನ ಜಾವದ ವೇಳೆ ಸಂಚರಿಸುತ್ತಿದ್ದಾಗ 5.20ರ ಸುಮಾರಿಗೆ ಡಿವೈಡರ್ಗೆ ಗುದ್ದಿ ಭೀಕರ ಅಪಘಾತ ಸಂಭವಿಸಿತ್ತು. ಕಾರು ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು. ಗಾಜು ಒಡೆದು ಹೊರಬಿದ್ದ ಪಂತ್ ಜೀವ ಉಳಿಸಿಕೊಂಡಿದ್ದರು.