ಹೈದರಾಬಾದ್: ಇನ್ನು ಮೂರು ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನವೆ ಭಾರತಕ್ಕೆ ದೊಡ್ಡ ಆತಂಕ ಎದುರಾಗಿದೆ. ಚಾಂಪಿಯನ್ಸ್ ಟ್ರೋಫಿಗಾಗಿ ಈಗಾಗಲೇ ಟೀಮ್ ಇಂಡಿಯಾ ಆಟಗಾರರು ದುಬೈಗೆ ತೆರಳಿದ್ದು ಭರ್ಜರಿ ಅಭ್ಯಾಸವನ್ನು ನಡೆಸಿದ್ದಾರೆ. ಇಂದು ದುಬೈನ ಐಸಿಸಿ ಅಕಾಡೆಮಿಯಲ್ಲಿ ನೆಟ್ ಸೆಷನ್‌ಗಳಲ್ಲೂ ಭಾಗವಹಿಸಿ ಬೆವರು ಸುರಿಸಿದ್ದಾರೆ.
ಆದರೆ ಅಭ್ಯಾಸದ ವೇಳೆ ಅನಿರೀಕ್ಷಿತ ಘಟನೆ ನಡೆದಿದ್ದ ಭಾರತೀಯ ಅಭಿಮಾನಿಗಳಿಗೆ ಭಾರೀ ಆತಂಕ ಹುಟ್ಟಿಸಿದೆ. ಹೌದು ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಅವರು ಹೊಡೆದ ಚೆಂಡು ನೇರವಾಗಿ ಹೋಗಿ ಮೈದಾನದಲ್ಲಿದ್ದ ರಿಷಭ್ ಪಂತ್ ಅವರ ಎಡ ಮೊಣಕಾಲಿಗೆ ಬಲವಾಗಿ ಬಡಿದಿದೆ. ಇದರಿಂದಾಗಿ ಪಂತ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಚೆಂಡು ಬಲವಾಗಿ ತಗುಲಿದ ಪರಿಣಾಮ ಪಂತ್ ಕೆಲ ಸಮಯ ನೋವಿನಿಂದ ಒದ್ದಾಡಿದ್ದಾರೆ. ಈ ವೇಳೆ ಅಲ್ಲೆ ಇದ್ದ ಫೀಲ್ಡಿಂಗ್ ಕೋಚ್ ಮತ್ತು ವೈದ್ಯಕೀಯ ತಂಡ ಧಾವಿಸಿ ಪಂತ್ ಅವರಗೆ ಮೈದಾನದಲ್ಲೆ ಚಿಕಿತ್ಸೆ ನೀಡಿದ್ದಾರೆ.
ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಪಂತ್ ಅವರನ್ನು ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯಲಾಯಿತು. ಸ್ವಲ್ಪ ಸಮಯದ ನಂತರ ಪಂತ್ ಚೇತರಿಸಿಕೊಂಡು ಮತ್ತೆ ಅಭ್ಯಾಸಕ್ಕೆ ಮರಳಿದರು. ಆದರೆ ಅಭ್ಯಾಸದ ವೇಳೆ ಸಂಪೂರ್ಣ ಚೇತರಿಸಿಕೊಂಡಂತೆ ಕಾಣಲಿಲ್ಲ. 2022ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಪಂತ್ ಅವರ ಕಾಲಿಗೆ ಗಾಯವಾಗಿದ್ದ ಕಡೆಗೆ ಚೆಂಡು ಬಡೆದಿದೆ. ಇದು ದೊಡ್ಡ ಗಾಯವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ತಂಡದ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಪಂದ್ಯಾವಳಿಗೂ ಮುನ್ನವೆ ಈ ಘಟನೆ ನಡೆದಿದ್ದು ಅಭಿಮಾನಿಗಳಿಗೆ ಆತಂಕ ಉಂಟುಮಾಡಿದೆ.