ಅಹಮದಾಬಾದ್:ಕಾರು ಅಪಘಾತಕ್ಕೀಡಾಗಿ ವರ್ಷಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ವಿಕೆಟ್ ಕೀಪರ್, ಡ್ಯಾಶಿಂಗ್ ಬ್ಯಾಟರ್ ರಿಷಭ್ ಪಂತ್ ಐಪಿಎಲ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಈಗಾಗಲೇ ತಮ್ಮ ಬ್ಯಾಟಿಂಗ್ ಖದರ್ ತೋರಿಸಿರುವ ಆಟಗಾರ, ವಿಕೆಟ್ ಕೀಪಿಂಗ್ ಕೌಶಲ್ಯ ತಮ್ಮಲ್ಲಿ ಕುಗ್ಗಿಲ್ಲ ಎಂಬುದನ್ನು ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಾಬೀತು ಮಾಡಿದ್ದಾರೆ.
ವಿಕೆಟ್ ಹಿಂದೆ ಎರಡು ಚುರುಕಾದ ಚಲನೆಯಿಂದ 2 ಸ್ಟಂಪಿಂಗ್ ಮತ್ತು 2 ಕ್ಯಾಚ್ ಪಡೆದ ಪಂತ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು. ಜೊತೆಗೆ ಬ್ಯಾಟಿಂಗ್ನಲ್ಲಿ 16 ರನ್ ಗಳಿಸಿ ಔಟಾಗದೇ ಉಳಿದರು. ತಂಡದ ಪರವಾಗಿ ಆಲ್ರೌಂಡರ್ ಆಟ ಪ್ರದರ್ಶಿಸಿದ ಪಂತ್, ಆಡುವ ಪ್ರತಿ ಪಂದ್ಯದಲ್ಲಿ ಹೊಸದನ್ನು ಕಂಡುಕೊಳ್ಳುವೆ ಎಂದು ಹೇಳಿದ್ದಾರೆ.
ಗುಜರಾತ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಬಳಿಕ ಮಾತನಾಡಿದ ಪಂತ್, "ನಾನು ಮೈದಾನಕ್ಕೆ ಬರುವ ಮೊದಲು ಉತ್ತಮ ರೀತಿಯಲ್ಲಿ ಆಡಲು ಬಯಸುವೆ. ಈ ಏಕೈಕ ಚಿಂತನೆಯಲ್ಲಿಯೇ ಇರುತ್ತೇನೆ. ಪ್ರತಿಯೊಂದು ಪಂದ್ಯವೂ ನಮಗೆ ಹೊಸ ಅನುಭವ ನೀಡುತ್ತದೆ. ಎಲ್ಲ ಪಂದ್ಯಗಳಲ್ಲಿ ಎಂಜಾಯ್ ಮಾಡುತ್ತಾ ಆಡುವೆ ಎಂದರು.
ಇನ್ನೂ ಉತ್ತಮ ಪ್ರದರ್ಶನ ಬೇಕಿದೆ:ಗುಜರಾತ್ ವಿರುದ್ಧ ದೊಡ್ಡ ಜಯ ಸಿಕ್ಕಿದೆ. ಆದರೆ, ಪಾಯಿಂಟ್ ಪಟ್ಟಿಯಲ್ಲಿ ನಾವಿನ್ನೂ ಕೆಳಗಿದ್ದೇವೆ. ಇದನ್ನು ಮೀರಬೇಕಾದರೆ, ಇನ್ನೂ ಉತ್ತಮ ಪ್ರದರ್ಶನ ನೀಡಬೇಕಿದೆ. ನಾವು ಸಂತೋಷಪಡಬೇಕಾದ ವಿಷಯಗಳು ಬಹಳಷ್ಟಿವೆ. ಟೂರ್ನಿಯಲ್ಲಿ ಚಾಂಪಿಯನ್ ಆಗುವುದು ನಮ್ಮ ಗುರಿ. ನಮ್ಮ ತಂಡವು ಈ ಬಗ್ಗೆ ಹೆಚ್ಚು ಗಮನ ಹರಿಸಿದೆ ಎಂದು ಪಂತ್ ತಿಳಿಸಿದರು.