ಕರ್ನಾಟಕ

karnataka

ETV Bharat / sports

'ನನ್ನ ಇನಿಂಗ್ಸ್​ ನೋಡಿರ್ತಾರೆ': ರೋಹಿತ್​ ವಿಶ್ವಕಪ್​ ಮಾತಿಗೆ ದಿನೇಶ್​ ಕಾರ್ತಿಕ್​ ಖಡಕ್​ 'ಬ್ಯಾಟಿಂಗ್​' - dinesh karthik - DINESH KARTHIK

38 ವರ್ಷದ ಹಿರಿಯ ಕ್ರಿಕೆಟಿಗ ದಿನೇಶ್​ ಕಾರ್ತಿಕ್​ ಆರ್​ಸಿಬಿ ತಂಡದ ಫಿನಿಶರ್​ ಮತ್ತು ಆಪತ್ಬಾಂಧವರಾಗಿದ್ದಾರೆ. ವಿರಾಟ್​, ಡು ಪ್ಲೆಸಿಸ್​ ಬಿಟ್ಟರೆ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಡಿಕೆ ಮಾತ್ರ.

ರೋಹಿತ್​ ವಿಶ್ವಕಪ್​ ಮಾತಿಗೆ ದಿನೇಶ್​ ಕಾರ್ತಿಕ್​ ಖಡಕ್​ 'ಬ್ಯಾಟಿಂಗ್​'
ರೋಹಿತ್​ ವಿಶ್ವಕಪ್​ ಮಾತಿಗೆ ದಿನೇಶ್​ ಕಾರ್ತಿಕ್​ ಖಡಕ್​ 'ಬ್ಯಾಟಿಂಗ್​'

By ETV Bharat Karnataka Team

Published : Apr 16, 2024, 12:23 PM IST

ಹೈದರಾಬಾದ್:ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ಸ್ಟಾರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ವೀರೋಚಿತ ಪ್ರದರ್ಶನ ನೀಡಿದರು. ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್​ಗೆ ಬಂದ ಕಾರ್ತಿಕ್ ಸನ್ ಬೌಲಿಂಗ್ ಪಡೆಯನ್ನು ಧೂಳೆಬ್ಬಿಸಿದರು. 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್​ನೊಂದಿಗೆ 83 ರನ್ ಚಚ್ಚಿ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ತಂಡ ಸೋತರೂ ಕಾರ್ತಿಕ್​ ಬ್ಯಾಟಿಂಗ್​ ಮಾತ್ರ ಅಭಿಮಾನಿಗಳ ಮನಸೂರೆಗೊಂಡಿತು.

ಪಂದ್ಯ ಮುಗಿದ ಬಳಿಕ ಆಸಕ್ತಿದಾಯಕ ಹೇಳಿಕೆ ನೀಡಿರುವ ದಿನೇಶ್ ಕಾರ್ತಿಕ್, "ಕಳೆದ ಪಂದ್ಯದಲ್ಲಿ ನಾಯಕರೊಬ್ಬರು (ರೋಹಿತ್ ಶರ್ಮಾ ಉದ್ದೇಶಿಸಿ) ವಿಶ್ವಕಪ್‌ಗಾಗಿ ಆಡುತ್ತಿದ್ದೇನೆ ಎಂದು ನನ್ನನ್ನು ಕಿಚಾಯಿಸಿದರು. ಇದೀಗ ಸನ್​ರೈಸರ್ಸ್ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಯಾವಾಗ ಕರೆದರೂ ನಾನು ಕ್ರಿಕೆಟ್ ಆಡಲು ಸಿದ್ಧ ಎಂದು ಹೇಳಿದರು.

ರೋಹಿತ್​ ಹೇಳಿದ್ದೇನು?:ಇತ್ತೀಚೆಗೆ ಆರ್‌ಸಿಬಿ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ ಭರ್ಜರಿಯಾಗಿ ಬ್ಯಾಟ್​ ಮಾಡಿದ್ದರು. ಈ ವೇಳೆ ಸ್ಲಿಪ್​ನಲ್ಲಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕಾರ್ತಿಕ್​ರ ಕಾಲೆಳೆದಿದ್ದರು. ಶಭಾಶ್ ಡಿಕೆ ವಿಶ್ವಕಪ್ ಆಡಲೇಬೇಕು ನೀನು. ಟಿ20 ವಿಶ್ವಕಪ್​ಗೆ ಸಿದ್ಧತೆ ನಡೆಸುತ್ತಿದ್ದೀಯಾ ಎಂದು ಕಿಚಾಯಿಸಿದ್ದರು. ಇದನ್ನು ಕೇಳಿಸಿಕೊಂಡ ಇಶಾನ್​ ಕಿಶನ್​ ಮತ್ತು ದಿನೇಶ್​ ಕಾರ್ತಿಕ್​ ನಕ್ಕಿದ್ದರು.

ಸ್ಟಂಪ್ಸ್ ಮೈಕ್‌ನಲ್ಲಿ ರೆಕಾರ್ಡ್ ಆದ ಮಾತುಗಳು ವೈರಲ್​ ಆಗಿದ್ದವು. ರೋಹಿತ್ ಅವರ ಈ ಮಾತುಗಳು ಕಾರ್ತಿಕ್​ರ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಿಶ್ವಕಪ್ ತಂಡದಲ್ಲಿ ಸ್ಥಾನ ರೋಹಿತ್​ ಮಾತನ್ನು ಆರ್‌ಸಿಬಿ ಬ್ಯಾಟ್ಸ್‌ಮನ್ ಗಂಭೀರವಾಗಿ ಪರಿಗಣಿಸಿ ಎಲ್ಲ ಪಂದ್ಯಗಳಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಜೊತೆಗೆ ಕೆಲ ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್‌ಗೆ ಕಾರ್ತಿಕ್ ಆಯ್ಕೆಯಾಗುವುದು ಖಚಿತ ಎಂದೂ ಕಾಮೆಂಟ್ ಮಾಡುತ್ತಿದ್ದಾರೆ.

ಮುಂಬೈ ವಿರುದ್ಧದ ಪಂದ್ಯದಲ್ಲಿ ಡಿಕೆ 23 ಎಸೆತಗಳಲ್ಲಿ 53 ರನ್​ ಬಾರಿಸಿದ್ದರು. ಇದರಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ ಗಳಿಸಿದ್ದರು. ಸೋಮವಾರ ನಡೆದ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ 35 ಎಸೆತಗಳಲ್ಲಿ 83 ರನ್​ ಚಚ್ಚಿ ಅಭಿಮಾನಿಗಳನ್ನು ದಂಗು ಬಡಿಸಿದ್ದಾರೆ. ಆದರೂ ಆರ್​ಸಿಬಿ ತಂಡ ಸನ್​ ವಿರುದ್ಧ 25 ರನ್​ಗಳ ಸೋಲು ಕಂಡಿತು.

ಇದನ್ನೂ ಓದಿ:ಆರ್​ಸಿಬಿ ತಂಡಕ್ಕೆ ಮತ್ತೊಂದು ಆಘಾತ: ಈ ಸ್ಫೋಟಕ ಬ್ಯಾಟರ್ ಐಪಿಎಲ್​ನಿಂದಲೇ ಔಟ್​ ಸಾಧ್ಯತೆ - Glenn Maxwell

ABOUT THE AUTHOR

...view details