ಹೈದರಾಬಾದ್:ಗುವಾಹಟಿ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಮಧ್ಯೆ ನಡೆಯಬೇಕಿದ್ದ ಪಂದ್ಯ ಮಳೆಗೆ ಆಹುತಿಯಾಗಿದ್ದು, ಅಭಿಮಾನಿಗಳು ಭಾರೀ ನಿರಾಸೆ ಅನುಭವಿಸಿದ್ದರು. ರಾತ್ರಿ 11 ಗಂಟೆಯವರೆಗೂ ಪಂದ್ಯ ನಡೆಯುತ್ತದೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್ ನಿರೀಕ್ಷೆಗೆ ವರುಣರಾಯ ಅವಕಾಶ ಮಾಡಿಕೊಡಲಿಲ್ಲ.
ಸತತ ಮಳೆಯಿಂದಆಗಿ ಪಂದ್ಯ ರದ್ದಾಗಿ ಇತ್ತಂಡಗಳಿಗೆ ತಲಾ 1 ಅಂಕ ಹಂಚಲಾಯಿತು. ಆದರೆ, ದೂರದ ಊರಿನಿಂದ ಪಂದ್ಯ ವೀಕ್ಷಣೆಗೆ ಹಣ ಖರ್ಚು ಮಾಡಿ ಬಂದಿದ್ದವರು ಮಳೆಗೆ ಹಿಡಿಶಾಪ ಹಾಕಿದ್ದಂತೂ ಸುಳ್ಳಲ್ಲ. ಇದೀಗ ಅಭಿಮಾನಿಗಳ ನಿರಾಸೆಯನ್ನು ಕೊಂಚ ಕಡಿಮೆ ಮಾಡಲು ರಾಜಸ್ಥಾನ ರಾಯಲ್ ಫ್ರಾಂಚೈಸಿ ಮುಂದಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿರುವ ಹಿನ್ನೆಲೆಯಲ್ಲಿ ಟಿಕೆಟ್ ಹೊಂದಿರುವವರಿಗೆ ಪೂರ್ತಿ ಹಣವನ್ನು ಹಿಂದಿರುಗಿಸುವುದಾಗಿ ಸೋಮವಾರ ಘೋಷಿಸಿದೆ. ತಂಡದ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಮಾನ್ಯ ಟಿಕೆಟ್ ಹೊಂದಿರುವವರು ಮರುಪಾವತಿ ಪಡೆಯಬಹುದು. ಇದಕ್ಕಾಗಿ ಟಿಕೆಟ್‌ಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದೆ.
"ದುರದೃಷ್ಟಕರ ಸಂಜೆ. ಆದರೆ ನಿಮ್ಮ ತಾಳ್ಮೆಗೆ ಧನ್ಯವಾದಗಳು. ಟಿಕೆಟ್ ಹಣಭ ಮರುಪಾವತಿ ಪ್ರಕ್ರಿಯೆಗಾಗಿ ನಿಮ್ಮಲ್ಲಿ ಭೌತಿಕ ಟಿಕೆಟ್‌ಗಳನ್ನು ಹಾಗೆಯೇ ಇರಿಸಿಕೊಳ್ಳಿ. ಮಾನ್ಯ ಟಿಕೆಟ್ ಹೊಂದಿರುವವರಿಗೆ ಟಿಕೆಟ್‌ನ ಮುಖಬೆಲೆಯ ಪೂರ್ತಿ ಹಣವನ್ನು ವಾಪಸ್ ನೀಡಲಾಗುವುದು" ಎಂದು ಬರೆದುಕೊಂಡಿದೆ.
ತವರಿನಲ್ಲಿ ಜಯ, ಎರಡನೇ ತವರಿನಲ್ಲಿ ಸೋಲು:ರಾಜಸ್ಥಾನ್ ರಾಯಲ್ಸ್ ತಂಡದ ತವರು ಮೈದಾನವಾದ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಎರಡನೇ ತವರಾಗಿ ಪರಿಗಣಿಸಿದ್ದ ಅಸ್ಸೋಂನ ಗುವಾಹಟಿ ಮೈದಾನದಲ್ಲಿ ಆಡಿದ 2 ರಲ್ಲಿ ಒಂದು ಸೋತರೆ, ಇನ್ನೊಂದು ಮಳೆಯಿಂದ ರದ್ದಾಯಿತು.
ಸಂಜು ಸ್ಯಾಮ್ಸನ್ ನೇತೃತ್ವದ ತಂಡ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಅಧಿಪತ್ಯ ಸಾಧಿಸಿದರೆ, ಎರಡು ಪಂದ್ಯಗಳನ್ನು ತಂಡದ ಪ್ರಮುಖ ಬ್ಯಾಟರ್ ರಿಯಾನ್ ಪರಾಗ್ ಅವರ ತವರು ಮೈದಾನವಾದ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲು ನಿಗದಿಪಡಿಸಲಾಗಿತ್ತು. ಈ ಮೈದಾನದಲ್ಲಿ ತಂಡ ಆಘಾತ ಅನುಭವಿಸಿತು. ಪಂಜಾಬ್ ಕಿಂಗ್ಸ್ ವಿರುದ್ಧ ಐದು ವಿಕೆಟ್‌ಗಳಿಂದ ಸೋತಿತು.
ರಾಜಸ್ಥಾನ ಮೊದಲ 9 ಪಂದ್ಯಗಳಲ್ಲಿ 8 ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತ್ತು. +0.273 ನೆಟ್ರನ್ರೇಟ್ ಹೊಂದಿದ್ದ ತಂಡ ನಂತರದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಆಘಾತಕಾರಿ ಸೋಲು ಅನುಭವಿಸಿತು. ಕೊನೆಯ ಪಂದ್ಯ ಮಳೆಗೆ ರದ್ದಾಯಿತು. ಇದರಿಂದ ತಂಡದ ಪ್ಲೇ ಆಫ್ನಲ್ಲಿ ಮೂರನೇ ಸ್ಥಾನಕ್ಕೆ ಜಾರಿತು.
ಮೇ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್‌ನಲ್ಲಿ ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಚ್ಚರಿಯ ರೀತಿಯಲ್ಲಿ ಪ್ಲೇಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ:ಫೈನಲ್ ತಲುಪುವ ತಂಡ ಯಾವುದು?: ಹೈದರಾಬಾದ್ v/s ಕೋಲ್ಕತ್ತಾ ಮಧ್ಯೆ ಮೊದಲ ಕ್ವಾಲಿಫೈಯರ್ ಫೈಟ್ - first qualifier