ನವದೆಹಲಿ: ಕ್ಯೂಬಾದ ಯುಸ್ನಿಲಿಸ್ ಗುಜ್ಮನ್ ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ಸೃಷ್ಟಿಸಿದ ಹರಿಯಾಣದ 29ರ ಹರೆಯದ ವಿನೇಶ್ ಫೋಗಟ್ ಅವರನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶ್ಲಾಘಿಸಿದರು. ಫೈನಲ್‌ನಲ್ಲಿ ವಿನೇಶ್ ಫೋಗಟ್ ಅವರು ಅಮೆರಿಕ ದೇಶದ ಸಾರಾ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಲಿದ್ದಾರೆ.
ಸಾಮಾಜಿಕ ಜಾಲತಾಣವಾದ ಎಕ್ಸ್‌ಯಲ್ಲಿ ರಾಹುಲ್ ಗಾಂಧಿ ಅವರು ವಿಶಿಷ್ಟ ಸಾಧನೆ ಮಾಡಿದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಪ್ಯಾರಿಸ್‌ನಲ್ಲಿ ವಿನೇಶ್ ಫೋಗಟ್ ಅವರ ಯಶಸ್ಸಿನ ಪ್ರತಿಧ್ವನಿಯನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಳಬಹುದು. ಫೋಗಟ್ ಅವರ ಸಾಮರ್ಥ್ಯಗಳು ಮತ್ತು ಉದ್ದೇಶಗಳನ್ನು ಅನುಮಾನಿಸುವವರಿಗೆ ಉತ್ತರ ದೊರೆತಿದೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಪೋಸ್ಟ್ ಹೀಗಿದೆ:''ಒಂದೇ ದಿನದಲ್ಲಿ ವಿಶ್ವದ ಮೂವರು ಅಗ್ರ ಕುಸ್ತಿಪಟುಗಳನ್ನು ಸೋಲಿಸಿದ ವಿನೇಶ್ ಫೋಗಟ್ ಅವರ ಬಗ್ಗೆ ಇಡೀ ದೇಶವೇ ಭಾವುಕವಾಗಿದೆ. ವಿನೇಶ್ ಮತ್ತು ಅವರ ಸಹ ಆಟಗಾರರ ಹೋರಾಟವನ್ನು ನಿರಾಕರಿಸಿದ ಮತ್ತು ಅವರ ಉದ್ದೇಶ ಮತ್ತು ಸಾಮರ್ಥ್ಯಗಳನ್ನು ಪ್ರಶ್ನಿಸಿದ ಎಲ್ಲರಿಗೂ ಅವರ ಉತ್ತರ ಸಿಕ್ಕಿದೆ. ಭಾರತದಲ್ಲಿ ರಕ್ತದ ಕಣ್ಣೀರು ಸುರಿಸುವಂತೆ ಮಾಡಿದ್ದ ಇಡೀ ಅಧಿಕಾರ ವ್ಯವಸ್ಥೆಯೇ ಇಂದು ವೀರ ಮಗಳ ಮುಂದೆ ಕುಸಿದು ಬಿದ್ದಿದೆ. ಇದು ಚಾಂಪಿಯನ್‌ಗಳ ಗುರುತು, ಅವರು ಮೈದಾನದಿಂದ ತಮ್ಮ ಉತ್ತರವನ್ನು ನೀಡುತ್ತಾರೆ. ಶುಭಾಶಯಗಳು ವಿನೇಶ್. ಪ್ಯಾರಿಸ್‌ನಲ್ಲಿ ನಿಮ್ಮ ಯಶಸ್ಸಿನ ಪ್ರತಿಧ್ವನಿ ದೆಹಲಿಯವರೆಗೂ ಸ್ಪಷ್ಟವಾಗಿ ಕೇಳಬಹುದು'' ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಈ ಗೆಲುವು ರಾಜಕೀಯವಾಗಿ ಏಕೆ ಮಹತ್ವದ್ದಾಗಿದೆ? ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯೂಎಫ್‌ಐ) ಮುಖ್ಯಸ್ಥ ಮತ್ತು ಆಗಿನ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೂವರು ಅಗ್ರ ಕುಸ್ತಿಪಟುಗಳಲ್ಲಿ ಫೋಗಟ್ ಒಬ್ಬರು. ಆಕೆಯ ಜೊತೆಯಲ್ಲಿ ಇತರ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ನಿಂತಿದ್ದರು.
ಮೇ 2023ರಲ್ಲಿ ಹೊಸ ಸಂಸತ್ತಿನ ಉದ್ಘಾಟನೆ ದಿನದಂದು, ಫೋಗಟ್, ಪುನಿಯಾ, ಮಲಿಕ್ ಮತ್ತು ಸಂಗೀತಾ ಫೋಗಟ್ ಮತ್ತು ಇತರ ಹಲವಾರು ಪ್ರತಿಭಟನಾ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಶಾಂತಿ ಕದಡಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೇ 30 ರಂದು, ಕುಸ್ತಿಪಟುಗಳು ಹರಿದ್ವಾರಕ್ಕೆ ಪ್ರಯಾಣಿಸಿ ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಬಿಡುವ ಮೂಲಕ ಪ್ರತಿಭಟಿಸಿದ್ದರು.
ಬ್ರಿಜ್ ಭೂಷಣ್ ಅವರು 2023ರಲ್ಲಿ ರಾಜೀನಾಮೆ ನೀಡುವ ಮೊದಲು 12 ವರ್ಷಗಳ ಕಾಲ WFI ನೇತೃತ್ವ ವಹಿಸಿದ್ದರು. ಜೊತೆಗೆ, ಆರು ಬಾರಿ ಸಂಸದರಾಗಿದ್ದ ಅವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಬಿಜೆಪಿ ಕೈಬಿಟ್ಟಿತು. ಕೇಂದ್ರ ಸರ್ಕಾರವು ಕ್ರೀಡಾಪಟುಗಳ ಬಗ್ಗೆ ಅಸಹಿಷ್ಣುತೆ ಹೊಂದಿದೆ ಎಂದು ಆರೋಪಿಸಿ ನಡೆದ ಪ್ರತಿಭಟನೆಗಳು ರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು.