R Ashwin Retirement Reason:ಭಾರತದ ಸ್ಟಾರ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಇತ್ತೀಚೆಗೆ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮಧ್ಯದಲ್ಲಿ ಹಠಾತ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಕೆಲವರು ಅಶ್ವಿನ್ ಅವರ ನಿರ್ಧಾರವನ್ನು ಶ್ಲಾಘಿಸಿದರೆ, ಮತ್ತೆ ಕೆಲವರು ವೈಮನಸ್ಸಿಗೆ ಜೋಡಣೆ ಮಾಡಿದ್ದರು. ಅಶ್ವಿನ್ ಅವರ ತಂದೆ ಕೂಡ ತಮ್ಮ ಮಗನಿಗೆ ಹಲವು ದಿನಗಳಿಂದ ಅವಮಾನವಾಗುತ್ತಿದ್ದರಿಂದ ಈ ದೊಡ್ಡ ಹೆಜ್ಜೆ ಇಡಲು ನಿರ್ಧರಿಸಿದ್ದರು ಎಂಬ ಹೇಳಿಕೆ ನೀಡಿದ್ದರು.
ಆದರೆ ಬಿಸಿಸಿಐ ಬಿಡುಗಡೆ ಮಾಡಿರುವ ಅಶ್ವಿನ್ರ ಕ್ರಿಕೆಟ್ ಜರ್ನಿ ವಿಡಿಯೋದಲ್ಲಿ ತಮ್ಮ ನಿವೃತ್ತಿಗೆ ಕಾರಣ ಏನು ಎಂಬುದರ ಬಗ್ಗೆ ಸುಳಿವು ನೀಡಿದ್ದಾರೆ. ಹೌದು, ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಂದರ್ಶನವೊಂದರಲ್ಲಿ, ತವರು ನೆಲದಲ್ಲಿ ನಡೆಯುವ ಯಾವುದೇ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳಲು ಭಾರತಕ್ಕೆ ಅವಕಾಶ ಮಾಡಿಕೊಡಲ್ಲ ಎಂಬ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ.
"2012ರಲ್ಲಿ ಇಂಗ್ಲೆಂಡ್ ವಿರುದ್ದ ಭಾರತ ಟೆಸ್ಟ್ ಸರಣಿ ಕಳೆದುಕೊಂಡಿತ್ತು. ಅಂದೇ ನಾನು ತಂಡಕ್ಕೆ ಭರವಸೆ ನೀಡಿದೆ. ಇನ್ಮುಂದೆ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳಲು ಭಾರತಕ್ಕೆ ಅವಕಾಶ ಮಾಡಿಕೊಡಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಆದ್ರೆ ಇತ್ತೀಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತು ಕ್ಲೀನ್ ಸ್ವೀಪ್ ಆಗಿ ಮುಖಭಂಗ ಅನುಭವಿಸಿತ್ತು. ಇದು ಕೂಡು ಅವರ ನಿವೃತ್ತಿಗೆ ಕಾರಣವಾಗಿರಬಹುದಾಗಿದೆ.