ಉದಯ್ ಸಾಗರ್ ಲೇಕ್ - ಉದಯಪುರ, ರಾಜಸ್ಥಾನ: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೊಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ದತ್ತ ಸಾಯಿ ಅವರೊಂದಿಗೆ ಭಾನುವಾರ ಅದ್ದೂರಿಯಾಗಿ ವಿವಾಹ ನೆರವೇರಿದೆ. ಕುಟುಂಬ ಸದಸ್ಯರು, ಆಪ್ತರು ಹಾಗೂ ವಿಶೇಷ ಅತಿಥಿಗಳ ಸಮ್ಮುಖದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಜಸ್ಥಾನದ ಉದಯ್ ಸಾಗರ್ ಲೇಕ್‌ನಲ್ಲಿರುವ ರಾಫೆಲ್ಸ್ ಹೋಟೆಲ್‌ನಲ್ಲಿ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಮಂಗಳವಾರ ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ.
ಕ್ರೀಡೆಯಲ್ಲಿ ಆಸಕ್ತಿ: ಸಿಂಧು ಅವರ ಪತಿ ಸಾಯಿ ವೆಂಕಟ ದತ್ತ ಬ್ಯಾಡ್ಮಿಂಟನ್ ಆಡುವುದಿಲ್ಲ. ಆದರೆ, ಕ್ರೀಡೆಯಲ್ಲಿ ಅವರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಸಾಯಿ ವೆಂಕಟ್ ಮೋಟಾರು ಕ್ರೀಡೆಗಳಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಆಗಾಗ್ಗೆ ಡರ್ಟ್ ಬೈಕಿಂಗ್ ಮತ್ತು ಮೋಟಾರ್ ಟ್ರೆಕ್ಕಿಂಗ್‌ನಲ್ಲಿ ದತ್ತ ಅವರು ಭಾಗವಹಿಸುತ್ತಾರೆ. ಕಾರು ಮತ್ತು ಬೈಕ್ ಗಳ ಕ್ರೇಜ್ ಹೊಂದಿರುವ ವೆಂಕಟ ಒಂದು ಡಜನ್ ಸೂಪರ್ ಬೈಕ್‌ಗಳು ಮತ್ತು ಕೆಲವು ಸ್ಪೋರ್ಟ್ಸ್ ಕಾರುಗಳನ್ನು ಹೊಂದಿರುವುದು ವಿಶೇಷ. ಅವರ ತಂದೆ ಗೌರೆಲ್ಲಿ ವೆಂಕಟೇಶ್ವರ ರಾವ್ ಅವರು ಆದಾಯ ತೆರಿಗೆ ಇಲಾಖೆಯ ಮಾಜಿ ಅಧಿಕಾರಿಯಾಗಿದ್ದರು.
ಪ್ರಾಸಿಡೆಕ್ಸ್ ಟೆಕ್ನಾಲಜೀಸ್ ಸ್ಥಾಪನೆ ಮಾಡಿರುವ ಸಾಯಿ ಅವರು, ಪ್ರಸ್ತುತ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಸಾಯಿ ಅವರ ತಾಯಿ ಲಕ್ಷ್ಮಿ. ಲಕ್ಷ್ಮಿ ಅವರ ತಂದೆ ಭಾಸ್ಕರ ರಾವ್ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿದ್ದಾರೆ. ಭಾಸ್ಕರ ರಾವ್ ಅವರ ಹಿರಿಯ ಸಹೋದರ ಉಜ್ಜಿನಿ ನಾರಾಯಣ ರಾವ್, ನಲ್ಗೊಂಡ ಜಿಲ್ಲೆ ಮುನುಗೋಡು ಮಾಜಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಜಿಂದಾಲ್ ಸೌತ್ ವೆಸ್ಟ್ (JSW) ನೊಂದಿಗೆ ತಮ್ಮ ವೃತ್ತಿಪರ ವೃತ್ತಿಜೀವನ ಪ್ರಾರಂಭಿಸಿದ ಸಾಯಿ, JSW ನ ಸಹ-ಮಾಲೀಕರಾದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವ್ಯವಹಾರಗಳನ್ನು ನೋಡಿಕೊಂಡಿದ್ದರು.
ವೆಂಕಟ್ ನನ್ನ ಫ್ಯಾಮಿಲಿ ಫ್ರೆಂಡ್. ಅವರಿಗೊಂದು ಕಂಪನಿ ಇದೆ. ಅದರ ನಿರ್ವಹಣೆಯಲ್ಲಿ ಸದಾ ನಿರತರಾಗಿರುತ್ತಾರೆ. ನನ್ನ ಶೆಡ್ಯೂಲ್ ಕೂಡ ತುಂಬಾ ಬ್ಯುಸಿಯಾಗಿದೆ. ಅದಕ್ಕೇ ನಾವಿಬ್ಬರೂ ಭೇಟಿಯಾಗೋದು ಕಡಿಮೆ. ವೆಂಕಟ್ ಬ್ಯಾಡ್ಮಿಂಟನ್ ಆಡುವುದಿಲ್ಲ. ಆದರೆ, ನನ್ನ ಎಲ್ಲಾ ಪಂದ್ಯಗಳನ್ನು ನೋಡಿದ್ದಾರೆ. ಕ್ರೀಡೆಗಳನ್ನು ಅವರು ಇಷ್ಟಪಡುತ್ತಾರೆ. ಆದರೆ ವ್ಯಾಪಾರದ ಕಡೆಗೆ ಒಲವು ಹೊಂದಿದ್ದಾರೆ. ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಡೇಟಾ ಸೈನ್ಸ್ ಕೋರ್ಸ್‌ಗಳನ್ನು ಮಾಡಿಕೊಂಡಿದ್ದಾರೆ. ಅವರು ಪ್ರಸ್ತುತ ತಮ್ಮ ಸ್ವಂತ ಕಂಪನಿ ಪಾಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. - ಪಿವಿ ಸಿಂಧು
ಇದನ್ನು ಓದಿ:ಕ್ರಿಕೆಟ್ನಲ್ಲಿ ಒಟ್ಟು 8 ವಿಧದ 'ಡಕ್ಔಟ್'ಗಳಿವೆ ಎಂದು ನಿಮಗೆ ಗೊತ್ತಾ?