ಕರ್ನಾಟಕ

karnataka

ಪುಣೇರಿ ಪಲ್ಟನ್​ಗೆ ಚೊಚ್ಚಲ ಪ್ರೊ ಕಬ್ಬಡ್ಡಿ ಕಿರೀಟ, ಹರಿಯಾಣ ಸ್ಟೀಲರ್ಸ್​ಗೆ ಸೋಲು

By ETV Bharat Karnataka Team

Published : Mar 2, 2024, 10:05 AM IST

ಪ್ರೊ ಕಬಡ್ಡಿ ಫೈನಲ್​ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಗೆದ್ದ ಪುಣೆ ಪಲ್ಟನ್​ ತಂಡ ಚಾಂಪಿಯನ್​ ಪಟ್ಟ ಗೆದ್ದಿದೆ.

ಪುಣೇರಿ ಪಲ್ಟನ್​ಗೆ ಚೊಚ್ಚಲ ಪ್ರೊ ಕಬ್ಬಡ್ಡಿ
ಪುಣೇರಿ ಪಲ್ಟನ್​ಗೆ ಚೊಚ್ಚಲ ಪ್ರೊ ಕಬ್ಬಡ್ಡಿ

ಹೈದರಾಬಾದ್:ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಪುಣೇರಿ ಪಲ್ಟನ್​ ಶುಕ್ರವಾರ ಇಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಪ್ರೊ ಕಬಡ್ಡಿ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.

ಜಿಎಂಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರೋಚಕ ಹಣಾಹಣಿಯಲ್ಲಿ ಪುಣೇರಿ ಪಲ್ಟನ್​ 28-25 ಅಂತರದಲ್ಲಿ ಜಯ ಸಾಧಿಸಿತು. ಮೊದಲ ಪ್ರಶಸ್ತಿಯ ಗುರಿಯಲ್ಲಿದ್ದ ಹರಿಯಾಣ ಸ್ಟೀಲರ್ಸ್​​ ಸೋಲುಂಡಿತು. ಆರಂಭದಿಂದಲೂ ಪುಣೇರಿ ಪೈಲ್ವಾನ್​ಗಳು ಅದ್ಭುತ ಡಿಫೆಂಡಿಂಗ್​​ ಮೂಲಕ ಖಾತೆ ತೆರೆದರು. ಇದಾದ ಬಳಿಕ ಎಲ್ಲೂ ಹರಿಯಾಣಕ್ಕೆ ಮುನ್ನಡೆ ಸಾಧಿಸಲು ಬಿಡಲಿಲ್ಲ.

ಸ್ಟೀಲರ್ಸ್‌ ಪರವಾಗಿ ರೈಡರ್​​ ಅಂಕಿತ್ ಮೊದಲ ಅಂಕ ಗಳಿಸಿದರು. ರಾಹುಲ್ ಸೇಠಪಾಲ್ ಸತತ ಅಂಕ ಗಳಿಸುವ ಮೂಲಕ ಹಣಾಹಣಿಯನ್ನು ಮತ್ತಷ್ಟು ರೋಚಕಗೊಳಿಸಿದರು. ಮೊದಲಾರ್ಧದ ಕೊನೆಯ ಒಂದು ನಿಮಿಷ ಬಾಕಿ ಇದ್ದಾಗ ಸೂಪರ್​ ರೈಡ್​ ಮಾಡಿದ ಪಂಕಜ್​ 4 ಅಂಕ ಸಂಪಾದಿಸಿ, 13-10 ರಲ್ಲಿ ಪುಣೆ ಮುನ್ನಡೆ ಪಡೆಯುವಂತೆ ಮಾಡಿದರು.

ದ್ವಿತೀಯಾರ್ಧದಲ್ಲಿ ಬಲಿಷ್ಠ ಹರಿಯಾಣ ತಿರುಗಿ ಬೀಳಲಿದೆ ಎಂದು ಭಾವಿಸಲಾಗಿತ್ತು. ಆದರೆ, ಇದ್ಯಾವುದಕ್ಕೂ ಆಸ್ಪದ ನೀಡದ ಪುಣೆ ಮತ್ತಷ್ಟು ಪ್ರಭಾವ ಮುಂದುವರೆಸಿತು. 23ನೇ ನಿಮಿಷದಲ್ಲಿ ಉಳಿದ ಇಬ್ಬರನ್ನೂ ಔಟ್​ ಮಾಡುವ ಮೂಲಕ ಪುಣೆಯ ಮೋಹಿತ್​​ ತಂಡಕ್ಕೆ 4 ಅಂಕ ತರುವ ಜೊತೆಗೆ ಮುನ್ನಡೆಯನ್ನು 18-11 ಕ್ಕೆ ಏರಿಸಿದರು. ಫೈನಲ್‌ನ ಏಕೈಕ ಆಲೌಟ್ ಕೂಡ ಇದಾಗಿತ್ತು.

ಇದಾದ ಬಳಿಕವೂ ಆಟ ಮುಂದುವರಿಸಿದ ಪುಣೆ, ಉತ್ತಮ ರೈಡಿಂಗ್​ ಮತ್ತು ಟ್ಯಾಕಲ್​​ನಿಂದ ಅಂಕ ಗಳಿಸುತ್ತಲೇ ಸಾಗಿತು. ಜೊತೆಗೆ ಬೋನಸ್​ ಅಂಕಗಳನ್ನು ಪಡೆದುಕೊಂಡಿತು. ಆಟದ ಕೊನೆಯವರೆಗೂ ಬಿಗಿ ಹಿಡಿತ ಸಾಧಿಸಿದ್ದ ಪಲ್ಟನ್​ ಅರ್ಹವಾಗಿಯೇ ಪ್ರಶಸ್ತಿ ಜಯಿಸಿತು.

9 ಅಂಕ ಗಳಿಸಿದ ಪಂಕಜ್​, 5 ಅಂಕ ಗಳಿಸಿದ ಪುಣೆ ಆಟಗಾರ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಟೂರ್ನಿಯುದ್ದಕ್ಕೂ ಡಿಫೆನ್ಸ್​ನಲ್ಲಿ ಕರಾಮತ್ತು ಮಾಡಿದ್ದ ನಾಯಕ ಜೈದೀಪ್​ ಮೋಹಿತ್​ ಫೈನಲ್​ನಲ್ಲಿ ಒಂದೂ ಅಂಕ ಗಳಿಸದೆ ಇರುವುದು ಹರಿಯಾಣದ ಸೋಲಿಗೆ ಬಹುಮುಖ್ಯ ಕಾರಣವಾಯಿತು.

ಅಸ್ಲಂ ಶ್ರೇಷ್ಠ ಆಟಗಾರ:ಪುಣೆ ತಂಡದ ನಾಯಕ ಅಸ್ಲಂ ಇನಾಮ್​ದಾರ್​ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು. 23 ಪಂದ್ಯಗಳಲ್ಲಿ 276 ಅಂಕ ಗಳಿಸಿದ ಆಶು ಮಲಿಕ್​ ಟೂರ್ನಿಯ ಶ್ರೇಷ್ಠ ಆಟಗಾರನಾದರು. 14 ಪಂದ್ಯಗಳಲ್ಲಿ 99 ಟ್ಯಾಕಲ್​ ಅಂಕಗಳನ್ನು ಗಳಿಸಿದ ಪುಣೆಯ ಮೊಹಮದ್​ ರೆಜಾ ಶದ್ಲು ಶ್ರೇಷ್ಠ ಡಿಫೆಂಡರ್​ ಆಗಿ ಹೊರಹೊಮ್ಮಿದರು.

ಇನ್ನೊಂದೆಡೆ, ಇಡೀ ಟೂರ್ನಿಯಲ್ಲಿ 99 ಟ್ಯಾಕಲ್​ ಪಾಯಿಂಟ್ಸ್​ ಗಳಿಸಿದ ಪುಣೆಯ ಶಾದ್ಲೂ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಟ್ಯಾಕಲ್​ ಅಂಕ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಒಟ್ಟಾರೆ ಟೂರ್ನಿಯಲ್ಲಿ ಅತಿ ಹೆಚ್ಚು ಟ್ಯಾಕಲ್​ ಪಡೆದ ದಾಖಲೆ ಯಪಿ ಯೋಧಾಸ್​ನ ನಿತೇಶ್​ಕುಮಾರ್​ ಅವರ ಹೆಸರಲ್ಲಿದೆ. 2018 ರಲ್ಲಿ ಅವರು 100 ಅಂಕ ಗಳಿಸಿದ್ದರು.

ಇದನ್ನೂ ಓದಿ;ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಪದಾರ್ಪಣೆ?

ABOUT THE AUTHOR

...view details