ಬೆಂಗಳೂರು: "ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ(WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿಕ್ಕ ವಿಜಯ, ನಮ್ಮ ಒಂದಿಡೀ ವರ್ಷ ಮೈದಾನದ ಹೊರಗೆ ಹಾಗೂ ಒಳಗಿನ ಕಾರ್ಯತಂತ್ರ ಹಾಗೂ ಯೋಜನೆ, ಅದರಲ್ಲೂ ಮುಖ್ಯವಾಗಿ ಆಟಗಾರರ ಸಿದ್ಧತೆ ಮತ್ತು ಬದ್ಧತೆಗೆ ಸಿಕ್ಕ ಪ್ರತಿಫಲ" ಎಂದು ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅಭಿಪ್ರಾಯಪಟ್ಟರು.
ಇತ್ತೀಚೆಗೆ ನಡೆದ WPL ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಚೊಚ್ಚಲ ಬಾರಿಗೆ ಕಪ್ ಎತ್ತಿ ಹಿಡಿದ ಖುಷಿ ಹಂಚಿಕೊಂಡ ಮಂಧಾನ, "ನಾವು ಬಯಸಿದಂತೆ ಸಿಕ್ಕ ಡ್ರೆಸ್ಸಿಂಗ್ ರೂಮ್ ಸಂಸ್ಕೃತಿ, ದೇಶೀಯ ಆಟಗಾರರಿಗಾಗಿ ಮೀಸಲಾದ ಅನೇಕ ಆಫ್-ಸೀಸನ್ ಕ್ಯಾಂಪ್ಗಳಿಂದ ಹಿಡಿದು ಪ್ರತೀ ಅವಕಾಶಗಳನ್ನೂ ನಾವು ಸದುಪಯೋಗಪಡಿಸಿಕೊಂಡ ಪ್ರತಿಫಲವೇ ನೀವು ಭಾನುವಾರ ಗ್ರೌಂಡ್ನಲ್ಲಿ ಕಂಡ ಅಂತಿಮ ವೈಭವ. ನಮ್ಮ ತಂಡದ ಪ್ರಮುಖ ಆಟಗಾರರು ತಮ್ಮ ಶ್ರೇಷ್ಠ ಪ್ರದರ್ಶನವನ್ನು ಅಂತಿಮ ಹಂತದಲ್ಲಿ ಪ್ರದರ್ಶಿಸಿದರು. ಇದರಿಂದ ಎದುರಾಳಿಯನ್ನು ಸಾಧಾರಣ ಮೊತ್ತಕ್ಕೆ ಸೀಮಿತಗೊಳಿಸಲು ಸಾಧ್ಯವಾಯಿತು. ಜೊತೆಗೆ ಬ್ಯಾಟಿಂಗ್ನಲ್ಲೂ ನಮ್ಮವರು ಪರಾಕ್ರಮ ಪ್ರದರ್ಶಿಸಿದರು. ಆದ್ದರಿಂದಲೇ ಕೇವಲ ಎರಡು ವಿಕೆಟ್‌ಗಳ ನಷ್ಟದೊಂದಿಗೆ ಸಮರ್ಥವಾಗಿ ಗುರಿ ತಲುಪಿದೆವು."
ಸಿದ್ಧತೆಯ ಕುರಿತು ಮಾತನಾಡಿದ ಅವರು, "ಕಪ್ ಗೆಲ್ಲುವ ನಮ್ಮ ಹಾಗೂ ಆರ್‌ಸಿಬಿ ಅಭಿಮಾನಿಗಳ ಹಲವು ವರ್ಷಗಳ ಕನಸು ನನಸಾಗಿಸಲು ನಮ್ಮ ತಂಡದ ಸಿದ್ಧತೆ ಪ್ರಮುಖ ಪಾತ್ರ ವಹಿಸಿತ್ತು. ತಂಡದ ಮಾಲೀಕರು ಇದು ನಿಮ್ಮ ತಂಡ, ನಿಮಗೆ ಹೇಗೆ ಬೇಕೋ ಆ ರೀತಿಯಲ್ಲಿ ರೂಪಿಸಿಕೊಳ್ಳಿ ಎನ್ನುವ ಮಾತು ಹೇಳಿದ್ದರು. ಅದು ನನಗೆ ದೊಡ್ಡ ಬೂಸ್ಟರ್ ಆಗಿತ್ತು. ತಂಡವನ್ನು ಖುಷಿಯಾಗಿಡುವುದರ ಜೊತೆಗೆ, ಸಕಾರಾತ್ಮಕವಾಗಿಯೂ ನಾವು ನಮ್ಮನ್ನು ರೂಪಿಸಿಕೊಂಡೆವು."
"ಕಳೆದ ವರ್ಷ ಗಾಯಗೊಂಡಿದ್ದ ಸೋಫಿ ಮೊಲಿನೆಕ್ಸ್ ಅವರಂಥ ಆಟಗಾರರನ್ನು ಗಮನದಲ್ಲಿರಿಸಿಕೊಂಡು ನಾವು ತಯಾರಿ ಪ್ರಾರಂಭಿಸಿದ್ದೆವು. ಗಾಯದ ಬಳಿಕ ಆಕೆಯ ಚೇತರಿಕೆಯನ್ನು ಟ್ರ್ಯಾಕ್ ಮಾಡಬೇಕಾಗಿತ್ತು. ಆ ಸಂದರ್ಭಗಳಲ್ಲಿ ನಮ್ಮ ಕೋಚ್ ಲ್ಯೂಕ್ ವಿಲಿಯಮ್ಸ್ ಆಸ್ಟ್ರೇಲಿಯಾದಿಂದ ತುಂಬಾ ಸಹಾಯ ಮಾಡಿದರು."