ಕರ್ನಾಟಕ

karnataka

ETV Bharat / sports

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕ; ನಿಶದ್ ಕುಮಾರ್‌ಗೆ ಬೆಳ್ಳಿ, ಪ್ರೀತಿ ಪಾಲ್‌ಗೆ ಕಂಚು - Paralympics 2024

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿವೆ. ಹೈ ಜಂಪ್ ಟಿ47 ವಿಭಾಗದಲ್ಲಿ ನಿಶದ್ ಕುಮಾರ್ ಬೆಳ್ಳಿ ಜಯಿಸಿದರೆ, 200 ಮೀಟರ್ ಟಿ35 ವಿಭಾಗದಲ್ಲಿ ಪ್ರೀತಿ ಪಾಲ್ ಕಂಚಿನ ಪದಕಕ್ಕೆ ಮುತ್ತಿಕ್ಕಿದರು.

Paralympics 2024
ಗೆಲುವಿನ ಸಂಭ್ರಮದಲ್ಲಿ ನಿಶದ್ ಕುಮಾರ್‌, ಪ್ರೀತಿ ಪಾಲ್‌ (PCI)

By PTI

Published : Sep 2, 2024, 7:09 AM IST

ಪ್ಯಾರಿಸ್:ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಮತ್ತೆರಡು ಪದಕ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಪಂದ್ಯಗಳಲ್ಲಿ ಹೈ ಜಂಪ್ ಟಿ47 ವಿಭಾಗದಲ್ಲಿ ನಿಶದ್ ಕುಮಾರ್ ಬೆಳ್ಳಿ ಗೆದ್ದರೆ, 200 ಮೀಟರ್ ಟಿ35 ವಿಭಾಗದಲ್ಲಿ ಪ್ರೀತಿ ಪಾಲ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಪ್ರೀತಿ ಪಾಲ್‌ ಇದರೊಂದಿಗೆ ಒಂದೇ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ದೇಶದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್‌ ಅಥ್ಲೀಟ್‌ ಎಂಬ ಐತಿಹಾಸಿಕ ಸಾಧನೆಯನ್ನೂ ಮಾಡಿದ್ದಾರೆ. ಶುಕ್ರವಾರವಷ್ಟೇ ಪ್ರೀತಿ 100 ಮೀಟರ್ ಟಿ35 ವಿಭಾಗದಲ್ಲಿ ಕಂಚು ಗೆದ್ದಿದ್ದರು. ಅಷ್ಟೇ ಅಲ್ಲದೇ, ಒಂದೇ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಭಾರತದ 2ನೇ ಮಹಿಳಾ ಅಥ್ಲೀಟ್‌ ಎಂಬ ಶ್ರೇಯವೂ ಇವರಿಗೆ ಸಲ್ಲುತ್ತದೆ. ಶೂಟರ್ ಅವನಿ ಲೇಖರಾ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚಿನ ಪದಕ ಗೆಲ್ಲುವ ಮೂಲಕ ಒಂದೇ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂದೆನಿಸಿಕೊಂಡಿದ್ದರು.

ನಿಶದ್ ಕುಮಾರ್ ಕಳೆದ ಬಾರಿಯ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ ಇದೇ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದು, ಇದರ ಅವರ ಸತತ ಎರಡನೇ ಪದಕ ಸಾಧನೆ ಎಂಬುದು ಗಮನಾರ್ಹ.

ನಿನ್ನೆಯ ಪಂದ್ಯದಲ್ಲಿ ಪ್ರೀತಿ 200 ಮೀಟರ್ ಟಿ35 ವಿಭಾಗದಲ್ಲಿ 30.01 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಅತ್ಯುತ್ತಮ ಸಾಧನೆಯೊಂದಿಗೆ ಕಂಚು ಜಯಿಸಿದರು. ಹೈ ಜಂಪರ್ ನಿಶದ್ ಕುಮಾರ್ 2.04 ಮೀಟರ್ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಗೆದ್ದರು.

ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ:ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ 'ಎಕ್ಸ್' ಮೂಲಕ ಪ್ರತಿಕ್ರಿಯಿಸಿ, ಪ್ರೀತಿ ಪಾಲ್ ಸಾಧನೆಯನ್ನು ಅಭಿನಂದಿಸಿದ್ದಾರೆ. ದ್ರೌಪದಿ ಮುರ್ಮು ಎಕ್ಸ್‌ನಲ್ಲಿ, ಅಭಿನಂದನೆಗಳು, 'ಪ್ರೀತಿ ಪಾಲ್ ಸಾಧನೆಗೆ ದೇಶ ಹೆಮ್ಮೆಪಡುತ್ತದೆ' ಎಂದರೆ, ಪ್ರಧಾನಿ ಮೋದಿ, 'ಪ್ಯಾರಾಲಿಂಪಿಕ್ಸ್‌-2024ರಲ್ಲಿ ಎರಡು ಪದಕ ಗೆಲ್ಲುವ ಮೂಲಕ ಪ್ರೀತಿ ಪಾಲ್ ಐತಿಹಾಸಿಕ ಸಾಧನೆ ಪ್ರದರ್ಶಿಸಿದ್ದಾರೆ. ಭಾರತೀಯರಿಗೆ ಅವರು ಸ್ಫೂರ್ತಿ. ಆಕೆಯ ಪರಿಶ್ರಮ ಅದ್ವಿತೀಯ' ಎಂದು ಅಭಿನಂದಿಸಿದ್ದಾರೆ.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ 2024:ಪದಕ ಪಟ್ಟಿ

ಸ್ಥಾನ ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
27 ಭಾರತ 1 2 4 7
1 ಚೀನಾ 30 26 11 67
2 ಗ್ರೇಟ್ ಬ್ರಿಟನ್ 23 12 8 43
3 ಅಮೆರಿಕ 8 10 8 26
4 ಬ್ರಿಜಿಲ್ 8 4 14 26
5 ಫ್ರಾನ್ಸ್‌ 6 9 10 25

ಇದನ್ನೂ ಓದಿ:ಪ್ರೈವೇಟ್​ ಜೆಟ್​ ಹೊಂದಿರುವ ಭಾರತೀಯ ಕ್ರಿಕೆಟರ್​ಗಳು: ಯಾರ ಬಳಿ ಎಷ್ಟು ಬೆಲೆಯ ಜೆಟ್​ ಇವೆ ಗೊತ್ತಾ? - Indian cricketer owns a private jet

ABOUT THE AUTHOR

...view details