ಪ್ಯಾರಿಸ್(ಫ್ರಾನ್ಸ್): ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲವಾದ ಕಾರಣಕ್ಕೆ 2023ರ ವಿಶ್ವ ಚಾಂಪಿಯನ್‌ಶಿಪ್‌ನಿಂದ ಅನರ್ಹಗೊಂಡಿದ್ದ ಅಲ್ಜೀರಿಯಾದ ಬಾಕ್ಸರ್ ಇಮಾನ್ ಖಲೀಫ್ ಗುರುವಾರ ತನ್ನ ಮೊದಲ ಒಲಿಂಪಿಕ್ಸ್ ಬಾಕ್ಸಿಂಗ್ ಪಂದ್ಯ ಗೆದ್ದು ಬೀಗಿದರು. ಆದರೆ, ಮಹಿಳಾ ಸ್ಪರ್ಧಿಯ ವಿರುದ್ಧ ದೈಹಿಕವಾಗಿ ಪುರುಷನ ಗುಣಲಕ್ಷಣಗಳಿರುವ ಇಮಾನ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿರುವುದು ತೀವ್ರ ವಿವಾದ ಹುಟ್ಟು ಹಾಕಿದೆ. ಈ ಕುರಿತು ಇದೀಗ ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮೌನ ಮುರಿದಿದೆ.
ಇಟಲಿಯ 25 ವರ್ಷದ ಬಾಕ್ಸರ್ ಏಂಜೆಲಾ ಕ್ಯಾರಿನಿ 66 ಕೆಜಿ ವೆಲ್ಟರ್‌ವೇಟ್ ವಿಭಾಗದಲ್ಲಿ ಅಲ್ಜೀರಿಯಾದ ಬಾಕ್ಸರ್ ಇಮಾನ್ ಖಲೀಫ್ ಅವರನ್ನು ಎದುರಿಸಿದ್ದರು. ಈ ಪಂದ್ಯದಲ್ಲಿ ಕ್ಯಾರಿನಿ ಅವರ ಮುಖಕ್ಕೆ ಖಲೀಫ್ ಬಲವಾಗಿ ಗುದ್ದಿದ್ದರು. ಇದರಿಂದ ಅವರ ಮೂಗಿಗೆ ತೀವ್ರ ಪೆಟ್ಟುಬಿದ್ದಿತ್ತು. ಕೂಡಲೇ ತನ್ನ ತರಬೇತುದಾರರೊಂದಿಗೆ ಮಾತನಾಡಿದ ಕ್ಯಾರಿನಿ, ಕೇವಲ 46 ಸೆಕೆಂಡುಗಳಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದರು.
''ದೈಹಿಕವಾಗಿ ಪುರುಷನ ಗುಣಲಕ್ಷಣಗಳನ್ನು ಹೊಂದಿರುವ ಇಮಾನ್‌ಗೆ ಸ್ಪರ್ಧಿಸಲು ಅವಕಾಶ ನೀಡಿರುವುದೇ ಇದಕ್ಕೆ ಕಾರಣ'' ಎಂದು ಕ್ಯಾರಿನಿ ತನಗಾದ ಅನ್ಯಾಯವನ್ನು ಬಾಕ್ಸಿಂಗ್ ರಿಂಗ್ನಲ್ಲೇ ಕಣ್ಣೀರಿಡುತ್ತಾ ಹೊರ ಹಾಕಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವರು ಇಮಾನ್ ಮಹಿಳೆ ಎಂದರೆ, ಇನ್ನು ಕೆಲವರು XY ಕ್ರೋಮೋಸೋಮ್‌ಗಳನ್ನು ಹೊಂದಿರುವ ಅವರು ಜೈವಿಕ ಪುರುಷ ಎಂದು ಕರೆದಿದ್ದಾರೆ. ಪುರುಷ ದೈಹಿಕ ಸಾಮರ್ಥ್ಯವಿರುವ ವ್ಯಕ್ತಿಯನ್ನು ಮಹಿಳೆಯರ ಕ್ರೀಡೆಗೆ ಅನುಮತಿ ನೀಡಿದ್ದಕ್ಕೆ ಒಲಿಂಪಿಕ್ಸ್ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಪಂದ್ಯದಿಂದ ಹೊರನಡೆದ ನಂತರ ಮಾತನಾಡಿದ ಕ್ಯಾರಿನಿ, ''ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಖಲೀಫ್ ಅರ್ಹತೆ ನಿರ್ಧರಿಸಲು ತನಗೆ ಯಾವುದೇ ಅಧಿಕಾರವಿಲ್ಲ. ಅವರೊಂದಿಗೆ ಹೋರಾಡಲು ಸಹ ಯಾವುದೇ ಸಮಸ್ಯೆ ಇಲ್ಲ. ನಾನು ರಾಜಕೀಯ ಹೇಳಿಕೆ ನೀಡುತ್ತಿಲ್ಲ. ಖಲಿಫ್ ವಿರುದ್ಧ ಹೋರಾಡಲೂ ಸಹ ನಿರಾಕರಿಸುತ್ತಿಲ್ಲ. ಓರ್ವ ಬಾಕ್ಸರ್ ಆಗಿ ನನ್ನ ಕೆಲಸ ಮಾಡಿದ್ದೇನೆ. ನಾನು ರಿಂಗ್‌ಗೆ ಇಳಿದು ಹೋರಾಡಿದೆ. ಆದರೆ, ಪಂದ್ಯ ಪೂರ್ಣಗೊಳಿಸದಿದ್ದಕ್ಕಾಗಿ ಬೇಸರವಿದೆ. ನನ್ನ ದೇಶಕ್ಕೆ ಪದಕ ನೀಡಬೇಕು ಎಂಬ ಛಲದಿಂದ ಕಣಕ್ಕಿಳಿದಿದ್ದೆ. ಅದೆಲ್ಲವೂ ಹುಸಿಯಾಯಿತು" ಎಂದು ಬೇಸರ ಹೊರಹಾಕಿದರು.
2022ರ ಐಬಿಎ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಖಲೀಫ್ ಅವರ ದೇಹದಲ್ಲಿ ಅತಿಯಾದ ಟೆಸ್ಟೋಸ್ಟೆರಾನ್ ಮಟ್ಟವಿರುವ ಕಾರಣ ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಿಂದ ನಿಷೇಧಿಸಲಾಗಿತ್ತು. ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (IBA) ಅಧ್ಯಕ್ಷ ಉಮರ್ ಕ್ರೆಮ್ಲೆವ್ ನವದೆಹಲಿಯಲ್ಲಿ ನಡೆದ 2023ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸದಂತೆ ಖಲೀಫ್ ಅವರರಿಗೆ ನಿರ್ಬಂಧ ಹೇರಿದ್ದರು.
ಆದರೆ, ಇದೀಗ ಖಲೀಫ್ ಪರ ಬ್ಯಾಟ್ ಬೀಸಿದ್ದು, ''ತಮ್ಮ ಕ್ರೀಡಾಪಟುವಿನ ವಿರುದ್ಧದ ಆಕ್ರೋಶವನ್ನು ಖಂಡಿಸಿದೆ. ಕೆಲವು ವಿದೇಶಿ ಮಾಧ್ಯಮಗಳು ಖಲೀಫ್ ವಿರುದ್ಧ ಅಪಪ್ರಚಾರ ಹರಡುತ್ತಿವೆ'' ಎಂದು ದೂಷಿಸಿದೆ.
ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಪ್ರತಿಕ್ರಿಯಿಸಿ, ''ಆನುವಂಶಿಕವಾಗಿ ಪುರುಷ ಗುಣಲಕ್ಷಣಗಳನ್ನು ಹೊಂದಿರುವ ಕ್ರೀಡಾಪಟುಗಳಿಗೆ 2021ರಿಂದ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದು ಸರಿಯಲ್ಲ'' ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದು ಪಿತೂರಿ-ಇಮಾನ್:''ಚಿನ್ನದ ಪದಕ ಗೆಲ್ಲುವುದನ್ನು ಬಯಸದ ಕೆಲವು ದೇಶಗಳಿವೆ. ಇದೊಂದು ಷಡ್ಯಂತ್ರ ಮತ್ತು ದೊಡ್ಡ ಪಿತೂರಿ. ನಾವು ಈ ಬಗ್ಗೆ ಮೌನವಾಗಿರುವುದಿಲ್ಲ'' ಎಂದು ಖಲೀಫ್ ಹೇಳಿದ್ದಾರೆ. ತಮ್ಮ ಪದಕಗಳ ಬೇಟೆ ಇಷ್ಟಕ್ಕೆ ನಿಲ್ಲುವುದಿಲ್ಲ ಎಂದೂ ತಿಳಿಸಿದ್ದಾರೆ.
ಇಮಾನ್ ಖಲೀಫಾ ಯಾರು?:ಟಿಯಾರೆಟ್ ಮೂಲದ 25 ವರ್ಷದ ಇಮಾನ್ ಖಲೀಫ್ ಅಲ್ಜೀರಿಯಾದ ಸದ್ಯ ಯುನಿಸಿಎಫ್ UNICEF ರಾಯಭಾರಿ ಕೂಡ ಹೌದು. ಖಲೀಫ್ ತಂದೆ ಬಾಲಕಿಯರು ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರುವುದನ್ನು ಒಪ್ಪುತ್ತಿರಲಿಲ್ಲ. ಆದರೆ, ಇಮಾನ್ ಮುಂದೆ ಚಿನ್ನದ ಪದಕ ಗೆದ್ದಾಗ ಬೆನ್ನು ತಟ್ಟಿ ನೀನು ಮುಂದಿನ ಪೀಳಿಗೆಗೆ ಸ್ಫೂರ್ತಿ ಎಂದು ಹೊಗಳಿದ್ದರು. 2018ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಾಕ್ಸಿಂಗ್‌ಗೆ ಪಾದಾರ್ಪಣೆ ಮಾಡಿದ್ದ ಇಮಾನ್, 17ನೇ ಸ್ಥಾನ ಪಡೆದರೆ, 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 19ನೇ ಸ್ಥಾನ ಪಡೆದರು. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ, ಕ್ವಾರ್ಟರ್ ಫೈನಲ್‌ನಲ್ಲಿ ಐರ್ಲೆಂಡ್‌ನ ಕೆಲ್ಲಿ ಹ್ಯಾರಿಂಗ್ಟನ್ ವಿರುದ್ಧ ಸೋಲು ಕಂಡರು. ಅದೇ ವರ್ಷದಲ್ಲಿ ಖಲೀಫಾ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸ್ಥಾನ ಪಡೆದರು. 2022 ಆಫ್ರಿಕನ್ ಚಾಂಪಿಯನ್‌ಶಿಪ್, ಮೆಡಿಟರೇನಿಯನ್ ಗೇಮ್ಸ್ ಮತ್ತು 2023ರ ಅರಬ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಗಮನ ಸೆಳೆದರು.
ಇದನ್ನೂ ಓದಿ:ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ 'ಉಚಿತ ವೀಸಾ'!: ಹೀಗೊಂದು ಭರವಸೆ ನೀಡಿದ ಭಾರತೀಯ ಮೂಲದ ಸಿಇಒ - Paris Olympics