ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ಮಹಿಳಾ ಟೇಬಲ್ ಟೆನಿಸ್ ತಂಡದ ಅಭಿಯಾನ ಕೊನೆಗೊಂಡಿದೆ. ಇಂದು ನಡೆದ ಮಹಿಳೆಯರ ತಂಡ ವಿಭಾಗದ ಪಂದ್ಯದಲ್ಲಿ ಭಾರತ ತಂಡ ಜರ್ಮನಿ ತಂಡದ ವಿರುದ್ಧ 1-3 ಅಂತರದಿಂದ ಸೋಲನುಭವಿಸಿತು.
ಇದರೊಂದಿಗೆ ಮೂವರನ್ನೊಳಗೊಂಡ ತಂಡ ಕ್ವಾರ್ಟರ್ ಫೈನಲ್‌ನಿಂದ ಹೊರಬಿತ್ತು. ಭಾರತ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸಲು ಸುವರ್ಣಾವಕಾಶವಿತ್ತು. ಆದರೆ ಜರ್ಮನಿ ವಿರುದ್ಧದ ಸೋಲಿನಿಂದ ಯಾವುದೇ ಪದಕವಿಲ್ಲದೇ ನಿರ್ಗಮಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ, ಅರ್ಚನಾ ಕಾಮತ್ ಮತ್ತು ಶ್ರೀಜಾ ಅಕುಲಾ ಜೋಡಿ ಜರ್ಮನಿಯ ವಾನ್ ಯುವಾನ್ ಮತ್ತು ಶಾನ್ ಕ್ಸಿಯೋನಾ ವಿರುದ್ಧ ಸ್ಪರ್ಧಿಸಿತ್ತು. ಈ ಪಂದ್ಯದಲ್ಲಿ ಭಾರತದ ಜೋಡಿ 1-3 ಅಂತರದಿಂದ ಸೋಲನುಭವಿಸಿತ್ತು. ಮೊದಲ ಸೆಟ್‌ನಲ್ಲಿ ಭಾರತ 5-11ರಿಂದ ಸೋತಿತು. ಆದರೆ ಎರಡನೇ ಸೆಟ್‌ನಲ್ಲಿ ಪುಟಿದೆದ್ದ ಭಾರತದ ಜೋಡಿ 11-8ರಿಂದ ಗೆದ್ದಿತು. ಇದಾದ ಬಳಿಕ ಮುಂದಿನ ಸೆಟ್‌ಗಳಲ್ಲಿ ಜರ್ಮನಿ 10-11 ಮತ್ತು 6-11 ಅಂತರದಿಂದ ಜಯ ಸಾಧಿಸಿತು.
ಎರಡನೇ ಸುತ್ತಿನ ಪಂದ್ಯ ಮನಿಕಾ ಬಾತ್ರಾ ಮತ್ತು ಜರ್ಮನಿಯ ಕೌಫ್‌ಮನ್ ಆನೆಟ್ ಮಧ್ಯೆ ನಡೆಯಿತು. ಈ ಪಂದ್ಯದಲ್ಲಿ ಮನಿಕಾ ಬಾತ್ರಾ 1-3 ಅಂತರದಿಂದ ಸೋಲನುಭವಿಸಬೇಕಾಯಿತು. ಮನಿಕಾ ಮೊದಲ ಸೆಟ್ ಅನ್ನು 11-5 ಅಂತರದಿಂದ ಗೆದ್ದುಕೊಂಡಿದ್ದರು. ಆದರೆ ಉಳಿದ ಮೂರು ಸೆಟ್‌ಗಳನ್ನು ಕ್ರಮವಾಗಿ 5-11, 7-11, 5-11 ರಿಂದ ಕಳೆದುಕೊಂಡರು.
ಮೂರನೇ ಸುತ್ತಿನಲ್ಲಿಅರ್ಚನಾ ಕಾಮತ್ ಮತ್ತು ಜರ್ಮನಿಯ ಶಾನ್ ಜಿಯೋನಾ ನಡುವೆ ನಡೆಯಿತು. ಈ ಪಂದ್ಯದಲ್ಲಿ ಕಾಮತ್ 1-3 ಅಂತರದಿಂದ ಸೋಲನುಭವಿಸಿದರು. ಮೊದಲ ಸೆಟ್ ಅನ್ನು 19-17 ರಿಂದ ಗೆದ್ದುಕೊಂಡಿದ್ದ ಕಾಮತ್ ಎರಡನೇ ಸೆಟ್ ಅನ್ನು 1-11 ಅಂತರದಿಂದ ಕಳೆದುಕೊಂಡರು. ನಂತರ ಮೂರನೇ ಸೆಟ್ ಅನ್ನು 11-5ರಿಂದ ಗೆದ್ದರು. ಬಳಿಕ ನಾಲ್ಕನೇ ಸೆಟ್‌ನಲ್ಲಿ ಜರ್ಮನಿ 9-11ಅಂತರದಿಂದ ಗೆದ್ದುಕೊಂಡಿತು.
ನಾಲ್ಕನೇ ಸುತ್ತಿನ ಪಂದ್ಯ ಭಾರತದ ಶ್ರೀಜಾ ಅಕುಲಾ ಮತ್ತು ಜರ್ಮನಿಯ ಕೌಫ್‌ಮನ್ ಆನೆಟ್ ನಡುವೆ ನಡೆಯಿತು. ಇದರಲ್ಲಿ ಶ್ರೀಜಾ 0-3 ಅಂತರದಿಂದ ಸೋಲನುಭವಿಸಿದರು. ಮೊದಲ ಸೆಟ್‌ನಲ್ಲಿ 6-11, ಎರಡನೇ ಸೆಟ್‌ನಲ್ಲಿ 7-11 ಮತ್ತು ಮೂರನೇ ಸೆಟ್‌ನಲ್ಲಿ 7-11ಅಂತರದಿಂದ ಕೌಫ್‌ಮನ್ ಗೆಲುವು ಸಾಧಿಸಿದರು.
ಇದನ್ನೂ ಓದಿ:ಭಾರತಕ್ಕೆ ದೊಡ್ಡ ಆಘಾತ: ಚಿನ್ನದ ನಿರೀಕ್ಷೆಯಲ್ಲಿದ್ದ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ನಿಂದಲೇ ಅನರ್ಹ - Vinesh Phogat is disqualified