ಪ್ಯಾರಿಸ್(ಫ್ರಾನ್ಸ್):ಭಾರತ ಮಹಿಳಾ ಟೇಬಲ್ ಟೆನಿಸ್ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಿಂಚಿನ ಪ್ರದರ್ಶನ ತೋರುತ್ತಿದೆ. ಸೌತ್ ಪ್ಯಾರಿಸ್ ಅರೆನಾದಲ್ಲಿ ಸೋಮವಾರ ನಡೆದ ರೋಚಕ 16ನೇ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ರೊಮೇನಿಯಾವನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆಯಿತು.
ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಅರ್ಚನಾ ಕಾಮತ್ ಮತ್ತು ಶ್ರೀಜಾ ಅಕುಲಾ 11-9, 12-10, 11-7 ಅಂಕಗಳೊಂದಿಗೆ ಪ್ರತಿಸ್ಪರ್ಧಿ ಆದಿನಾ ಡಯಾಕೋನು ಮತ್ತು ಎಲಿಜಬೆತ್ ಸಮರಾ ಅವರನ್ನು ಮಣಿಸಿ ಉತ್ತಮ ಆರಂಭ ನೀಡಿದರು. ಇದರೊಂದಿಗೆ 1-0 ಅಂತರದಿಂದ ಮುನ್ನಡೆ ಸಾಧಿಸಿದರು. ನಂತರ ಮಣಿಕಾ ಬಾತ್ರಾ ಮುನ್ನಡೆಯನ್ನು 2-0ಗೆ ಕೊಂಡೊಯ್ದರು.
ಮೂರನೇ ಸುತ್ತಿನಲ್ಲಿ ಸ್ಟಾರ್ ಪ್ಯಾಡ್ಲರ್ ಶ್ರೀಜಾ ಅಕುಲಾ ಸೋಲನುಭವಿಸಿದರು. ರೋಚಕ 5 ಗೇಮ್‌ಗಳ ಸುತ್ತಿನಲ್ಲಿ ಅಕುಲಾ, ರೊಮೇನಿಯಾದ ಎಲಿಸಬೆಟ್ಟಾ ಸಮರಾ ವಿರುದ್ಧ ಸೋಲು ಕಂಡರು. ಯೂರೋಪಿಯನ್ ಚಾಂಪಿಯನ್ ಸಮರಾ 8-11, 11-4, 7-11, 11-6, 11-8 ಅಂತರದಿಂದ ಗೆಲುವು ಸಾಧಿಸಿ 2-1 ರಿಂದ ರೊಮೇನಿಯಾದ ಖಾತೆ ತೆರೆದರು.
ನಾಲ್ಕನೇ ಸುತ್ತಿನಲ್ಲಿ ಅರ್ಚನಾ ಕಾಮತ್ 11-5, 8-11, 11-7, 11-9 ಸೆಟ್‌ಗಳಿಂದ ಪ್ರತಿಸ್ಪರ್ಧಿ ವಿರುದ್ಧ ಸೋಲು ಕಂಡರು. ಇದರೊಂದಿಗೆ ರೊಮೇನಿಯಾ 2-2 ಅಂತರದಿಂದ ಸಮಬಲ ಸಾಧಿಸಿತು. ನಂತರ ತಂಡವನ್ನು ಸೆಮೀಸ್‌ಗೆ ಕೊಂಡೊಯ್ಯುವ ಹೊರೆ ಮಣಿಕಾ ಅವರ ಹೆಗಲ ಮೇಲಿತ್ತು. ಅದರಂತೆ ಅಂತಿಮ ಸುತ್ತಿನಲ್ಲಿ ಪಾಯಿಂಟ್ಗಾಗಿ ಕಠಿಣ ಪೈಪೋಟಿ ನಡೆಸಿದ ಮಣಿಕಾ, ಎದುರಾಳಿ ಬರ್ನಾಡೆಟ್ಟೆ ವಿರುದ್ದ 9-9 ಅಂತರದಿಂದ ಸಮಬಲ ಸಾಧಿಸಿದರು. ಎರಡನೇ ಸುತ್ತನ್ನು ತಮ್ಮದಾಗಿಸಿಕೊಳ್ಳಲು ಬಾತ್ರಾ ಕಠಿಣ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. 5-5 ಅಂತದಿಂದ ಈ ಸುತ್ತು ಡ್ರಾಗೊಂಡಿತು.
ಅಂತಿಮ ಸುತ್ತಿನಲ್ಲಿ ಪುಟಿದೆದ್ದ ಬಾತ್ರಾ ತನ್ನ ಎದುರಾಳಿ ಮೇಲೆ ಪ್ರಾಬಲ್ಯ ಮೆರೆದು 11-8ರಿಂದ ಗೆಲುವು ಸಾಧಿಸಿದರು. ಇದರೊಂದಿಗೆ ಭಾರತ ಕ್ವಾರ್ಟರ್ ಫೈನಲ್‌ಗೂ ಅರ್ಹತೆ ಪಡೆಯಿತು. ಕ್ವಾರ್ಟರ್ ಫೈನಲ್‌ನಲ್ಲಿ ಯುಎಸ್‌ಎ ಅಥವಾ ಜರ್ಮನಿಯನ್ನು ಎದುರಿಸಲಿದೆ.
ಇದನ್ನೂ ಓದಿ:ಈತ ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದು 23 ಗೋಲ್ಡ್ ಮೆಡಲ್!: ಇದು ವಿಶ್ವದ 162 ದೇಶಗಳು ಗೆದ್ದ ಚಿನ್ನಕ್ಕಿಂತ ಹೆಚ್ಚು! - Michael Phelps