ಹೈದರಾಬಾದ್: ಶುಕ್ರವಾರ (ನಾಳೆ)ದಿಂದ ಪ್ಯಾರಿಸ್ ಒಲಿಂಪಿಕ್ಸ್-2024 ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ 206 ರಾಷ್ಟ್ರಗಳಿಂದ 10 ಸಾವಿರಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಈ ಪೈಕಿ ಭಾರತ 117 ಕ್ರೀಡಾಪಟುಗಳೊಂದಿಗೆ ಪ್ಯಾರಿಸ್ಗೆ ಪಯಣಿಸಿದೆ.
ಈ ಪೈಕಿ ಅರ್ಧದಷ್ಟು ಭಾರತೀಯ ಕ್ರೀಡಾಪಟುಗಳು ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅನುಭವಸ್ತರೂ ತಂಡದಲ್ಲಿದ್ದಾರೆ. ಹಾಗಾಗಿ, ಭಾರತ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ.
ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ 121 ಕ್ರೀಡಾಪಟುಗಳೊಂದಿಗೆ ಭಾರತ ಕೂಟದಲ್ಲಿ ಭಾಗವಹಿಸಿತ್ತು. ಈ ಸಲ 117 ಕ್ರೀಡಾಪಟುಗಳೊಂದಿಗೆ ಕಣಕ್ಕಿಳಿಯಲಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಎರಡನೇ ಅತಿದೊಡ್ಡ ತಂಡವಾಗಿ ಭಾರತ ಗುರುತಿಸಿಕೊಂಡಿದೆ. ಮಹಿಳಾ ಹಾಕಿ ತಂಡವು ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವ ಕಾರಣ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಚೊಚ್ಚಲ ಒಲಿಂಪಿಕ್ಸ್:ತಂಡದಲ್ಲಿ 70 ಪುರುಷರು ಮತ್ತು 47 ಮಹಿಳಾ ಕ್ರೀಡಾಪಟುಗಳಿದ್ದು ಈ ಪೈಕಿ 72 ಸ್ಪರ್ಧಾಳುಗಳು ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಕ್ರೀಡಾಪಟುಗಳ ವಿವರ:ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವವರ ಪೈಕಿ ಅಥ್ಲೀಟ್ಗಳ ಸಂಖ್ಯೆ ಹೆಚ್ಚಿದೆ. ಇದರಲ್ಲಿ 11 ಮಹಿಳೆಯರು ಮತ್ತು 18 ಪುರುಷರು ಸೇರಿ ಒಟ್ಟು 29 ಅಥ್ಲೀಟ್ಗಳಿದ್ದಾರೆ. ಉಳಿದಂತೆ, ಶೂಟಿಂಗ್ನಲ್ಲಿ 21 ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಹಾಕಿ (19), ಟೇಬಲ್ ಟೆನಿಸ್ನಲ್ಲಿ 8 ಆಟಗಾರರು ಪ್ರತಿನಿಧಿಸುತ್ತಾರೆ. ಬ್ಯಾಡ್ಮಿಂಟನ್ನಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಸೇರಿದಂತೆ ಏಳು ಸ್ಪರ್ಧಿಗಳಿದ್ದಾರೆ. ಕುಸ್ತಿ, ಬಿಲ್ಲುಗಾರಿಕೆ ಮತ್ತು ಬಾಕ್ಸಿಂಗ್‌ನಲ್ಲಿ ತಲಾ ಆರು ಮಂದಿ ಪ್ರತಿನಿಧಿಸಲಿದ್ದಾರೆ. ನಂತರದಲ್ಲಿ ಗಾಲ್ಫ್ (4), ಟೆನಿಸ್ (3), ಈಜು (2) ಮತ್ತು ರೋಯಿಂಗ್ ಮತ್ತು ವೇಟ್ ಲಿಫ್ಟಿಂಗ್, ಕುದುರೆ ಸವಾರಿ, ಜೂಡೋನಲ್ಲಿ ತಲಾ ಒಬ್ಬರು ಪ್ರತಿನಿಧಿಸಲಿದ್ದಾರೆ.
ರಾಜ್ಯವಾರು ಕ್ರೀಡಾಪಟುಗಳು:ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಕ್ರೀಡಾಪಟುಗಳು ಹರಿಯಾಣದಿಂದ ಭಾಗವಹಿಸುತ್ತಿದ್ದು, ಒಟ್ಟು 24 ಜನ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ನಂತರ ಸ್ಥಾನದಲ್ಲಿ ಪಂಜಾಬ್ ಇದ್ದು 19 ಕ್ರೀಡಾಪಟುಗಳು ತಂಡದಲ್ಲಿದ್ದಾರೆ. ಕರ್ನಾಟಕದಿಂದಲೂ 9 ಜನರು ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ.
ಕ್ರೀಡೆಗಳು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 16 ವಿವಿಧ ಕ್ರೀಡಾ ಕೂಟಗಳಲ್ಲಿ ಸ್ಪರ್ಧಿಸುತ್ತಿದೆ.
ತಂಡದಲ್ಲಿರುವ ಪದಕ ವಿಜೇತರು:ಭಾರತೀಯ ತಂಡ ಐದು ಪದಕ ವಿಜೇತರನ್ನು ಒಳಗೊಂಡಿದೆ. ಇದರಲ್ಲಿ ನೀರಜ್ ಚೋಪ್ರಾ, ಮೀರಾಬಾಯಿ ಚಾನು, ಪಿವಿ ಸಿಂಧು, ಲೋವ್ಲಿನಾ ಬೊರ್ಗೊಹೈನ್ ಮತ್ತು ಪುರುಷರ ಹಾಕಿ ತಂಡ ಸೇರಿದೆ.
ಇದನ್ನೂ ಓದಿ:ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ವಿಶ್ವ ನಂ1 ಟೆನಿಸ್ ಆಟಗಾರ ಸಿನ್ನರ್ - Jannik Sinner