ಕರ್ನಾಟಕ

karnataka

ETV Bharat / sports

ಪ್ಯಾರಿಸ್​ ಒಲಿಂಪಿಕ್​​ಗೆ ವರ್ಣರಂಜಿತ ತೆರೆ: ಪರೇಡ್​ನಲ್ಲಿ ಮನು ಭಾಕರ್​, ಶ್ರೀಜೇಶ್ ಇತರರು ಭಾಗಿ - Paris Olympics 2024 - PARIS OLYMPICS 2024

ಪ್ಯಾರಿಸ್ ಒಲಿಂಪಿಕ್​-2024ಕ್ಕೆ ತೆರೆ ಬಿದ್ದಿದೆ. ಪ್ರಖ್ಯಾತ ಗಾಯಕರು, ಸಂಗೀತ ದಿಗ್ಗಜರು ಅದ್ಭುತ ಪ್ರದರ್ಶನದ ಮೂಲಕ ವರ್ಣರಂಜಿತ ಸಮಾರೋಪ ಸಮಾರಂಭಕ್ಕೆ ಮೆರುಗು ತಂದರು.

olympics
ಒಲಿಂಪಿಕ್ಸ್ ಸಮಾರೋಪ ಸಮಾರಂಭ (IANS)

By ANI

Published : Aug 12, 2024, 8:12 AM IST

ಪ್ಯಾರಿಸ್:ಒಲಿಂಪಿಕ್​ 2024ಕ್ಕೆ ಪ್ಯಾರಿಸ್‌ನ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ತೆರೆ ಬಿದ್ದಿದೆ. ಕ್ರೀಡಾಲೋಕದ ಹಬ್ಬದ ವಿದಾಯದ ಕಾರ್ಯಕ್ರಮವು ಮುಂದಿನ 2028ರ ಒಲಿಂಪಿಕ್ ಕ್ರೀಡಾಕೂಟದ ತಾಣವಾದ ಲಾಸ್ ಏಂಜಲೀಸ್‌ಗೆ ಜವಾಬ್ದಾರಿ ರವಾನೆಗೆ ಸಾಕ್ಷಿಯಾಯಿತು. LA28 (ಲಾಸ್​ ಎಂಜಲಿಸ್​ 2028) ಹಸ್ತಾಂತರಿಸುವಾಗ ಕ್ಯಾಲಿಫೋರ್ನಿಯಾದ ಗಾಯಕ ಹೆಚ್ಇಆರ್ ಅಮೆರಿಕದ ರಾಷ್ಟ್ರಗೀತೆಯನ್ನು ಹಾಡಿದರೆ, ​ಟಾಮ್ ಕ್ರೂಸ್ ರಾಪ್ಪಲ್ಲಿಂಗ್ ಸಾಹಸ ಪ್ರದರ್ಶಿಸಿದರು.

ಒಲಿಂಪಿಕ್ಸ್ ಸಮಾರೋಪ ಸಮಾರಂಭ (IANS)

ಭಾರತದ ಪದಕ ವಿಜೇತರಾದ ಮನು ಭಾಕರ್ ಹಾಗೂ ಹಾಕಿ ಆಟಗಾರ ಶ್ರೀಜೇಶ್ ತ್ರಿವರ್ಣ ಧ್ವಜಧಾರಿಗಳಾಗಿ ಸಮಾರೋಪ ಸಮಾರಂಭದ ಪರೇಡ್​ನಲ್ಲಿ ಪಾಲ್ಗೊಂಡರು. ಲಕ್ಷಾಂತರ ಕ್ರೀಡಾಭಿಮಾನಿಗಳು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ಪರೇಡ್​ ನಡೆಯಿತು.

ಭಾರತದ ಕ್ರೀಡಾಪಟುಗಳು (IANS)

ಫ್ರೆಂಚ್ ಗಾಯಕ, ಗೀತರಚನಾಕಾರ ಜಹೋ ಡಿ ಸಗಾಜನ್, ಫ್ರೆಂಚ್ ಸಂಗೀತ ದಿಗ್ಗಜ ಎಡಿತ್ ಪಿಯಾಫ್ ಅವರ "ಸೌಸ್ ಲೆ ಸಿಯೆಲ್ ಡಿ ಪ್ಯಾರಿಸ್" ನಿರೂಪಣೆಯೊಂದಿಗೆ ಸಮಾರೋಪ ಸಮಾರಂಭಕ್ಕೆ ಚಾಲನೆ ಸಿಕ್ಕಿತು. ಸಮಾರೋಪ ಸಮಾರಂಭದಲ್ಲಿ ಪ್ರೋಟೋಕಾಲ್‌ ಪ್ರಕಾರ ಗ್ರೀಕ್ ಧ್ವಜವನ್ನು ಹಾರಿಸಲಾಯಿತು. 1995ರಲ್ಲೇ ಆರಂಭಗೊಂಡಿರುವ ವರ್ಸೈಲ್ಸ್‌ನ ಫ್ರೆಂಚ್ ಇಂಡೀ ರಾಕ್ ಬ್ಯಾಂಡ್ ಪ್ರದರ್ಶನವು ನೆರೆದಿದ್ದ ಕ್ರೀಡಾ ಪ್ರೇಮಿಗಳನ್ನು ಬೆರಗುಗೊಳಿಸಿತು. ಫ್ರೆಂಚ್ ಕಲಾವಿದ ಕವಿನ್ಸ್ಕಿ ಸುಪ್ರಸಿದ್ದ ನೈಟ್‌ಕಾಲ್ ಪ್ರದರ್ಶಿಸಿ ಜನರು ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣಕ್ಕೆ ಮತ್ತಷ್ಟು ರಂಗು ತಂದರು. ಪಿಯಾನೋ ವಾದಕ ಅಲೈನ್ ರೋಚೆ 'ದಿ ಹಿಮ್ ಟು ಅಪೊಲೊ' ಪ್ರದರ್ಶನ ಮಾಡಿದರು. ಒಪೆರಾ ಗಾಯಕ ಬೆಂಜಮಿನ್ ಬರ್ನ್‌ಹೈಮ್ ಸಾಥ್​ ನೀಡಿದರು.

ಒಲಿಂಪಿಕ್​ ಸಮಾರೋಪ ಸಮಾರಂಭ (IANS)

ಅಮೆರಿಕಕ್ಕೆ ಅಗ್ರಸ್ಥಾನ:40 ಚಿನ್ನ, 44 ಬೆಳ್ಳಿ ಮತ್ತು 42 ಕಂಚು ಸೇರಿದಂತೆ ಒಟ್ಟು 126 ಪದಕಗಳೊಂದಿಗೆ ಪ್ಯಾರಿಸ್ ಒಲಿಂಪಿಕ್​ ಪದಕ ಪಟ್ಟಿಯಲ್ಲಿ ಯುಎಸ್ಎ ಅಗ್ರಸ್ಥಾನ ಪಡೆಯಿತು. ಎರಡನೇ ಸ್ಥಾನದಲ್ಲಿರುವ ಚೀನಾ 40 ಚಿನ್ನ, 27 ಬೆಳ್ಳಿ ಹಾಗೂ 24 ಕಂಚಿನ ಪದಕಗಳೊಂದಿಗೆ ಒಟ್ಟು 91 ಪದಕಗಳನ್ನು ಗೆದ್ದಿದೆ. 20 ಚಿನ್ನ, 12 ಬೆಳ್ಳಿ ಮತ್ತು 13 ಕಂಚಿನ ಪದಕಗಳೊಂದಿಗೆ ಒಟ್ಟು 45 ಪದಕಗಳನ್ನು ಜಯಿಸಿದ ಜಪಾನ್ ಮೂರನೇ ಸ್ಥಾನ ಗಳಿಸಿತು. ಒಂದು ಬೆಳ್ಳಿ ಪದಕ ಮತ್ತು ಐದು ಕಂಚಿನ ಪದಕಗಳೊಂದಿಗೆ ಒಟ್ಟು 6 ಪದಕಗಳನ್ನು ಜಯಿಸಿದ ಭಾರತವು 71ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಮನು ಭಾಕರ್​, ಶ್ರೀಜೇಶ್​ (IANS)

117 ಭಾರತೀಯ ಅಥ್ಲೀಟ್‌ಗಳ ತಂಡವು ಜಾಗತಿಕ ಕ್ರೀಡಾಕೂಟಕ್ಕೆ ಪದಕಗಳಿಗಾಗಿ ಸೆಣಸಾಡಿತು. ಶೂಟರ್​ ಮನು ಭಾಕರ್ ಈ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟರು. ಅಲ್ಲದೆ, ಕಂಚಿನ ಪದಕದೊಂದಿಗೆ, ಒಲಿಂಪಿಕ್ ಶೂಟಿಂಗ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜೊತೆಗೆ, ಸರಬ್ಜೋತ್ ಸಿಂಗ್ ಜೊತೆ ಮಿಶ್ರ ತಂಡದಲ್ಲಿಯೂ 10 ಮೀಟರ್ ಏರ್ ಪಿಸ್ತೂಲ್​ ಸ್ಪರ್ಧೆಯಲ್ಲಿ ಕಂಚಿಗೆ ಕೊರಳೊಡ್ಡಿದ ಮನು ಭಾಕರ್​, ಒಂದೇ ಒಲಿಂಪಿಕ್ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಬರೆದರು. ಸರಬ್ಜೋತ್‌ರೊಂದಿಗೆ ಮನು ಗೆದ್ದ ಪದಕವು ಶೂಟಿಂಗ್‌ನಲ್ಲಿ ನಮ್ಮ ದೇಶದ ತಂಡವೊಂದರ ಚೊಚ್ಚಲ ಪದಕವಾಗಿದೆ.

ಭಾರತದ ಕ್ರೀಡಾಪಟುಗಳು (IANS)

ಸ್ವಪ್ನಿಲ್ ಕುಸಾಲೆ ಶೂಟಿಂಗ್‌ನಲ್ಲಿ ಭಾರತಕ್ಕೆ ಮೂರನೇ ಪದಕ ತಂದರು. ಇದು ಒಂದೇ ಒಲಿಂಪಿಕ್​ನಲ್ಲಿ ಈ ಕ್ರೀಡೆಯಲ್ಲಿ ಮೂಡಿಬಂದ ಭಾರತದ ಶ್ರೇಷ್ಠ ಸಾಧನೆಯಾಗಿದೆ. 50 ಮೀಟರ್ ರೈಫಲ್ ತ್ರಿ ಪೊಸಿಷನ್‌ನಲ್ಲಿ ಭಾರತಕ್ಕೆ ಬಂದ ಮೊದಲ ಪದಕ ಇದಾಗಿದೆ.

ಭಾರತೀಯ ಪುರುಷರ ಹಾಕಿ ತಂಡವು ಪ್ಯಾರಿಸ್‌ನಲ್ಲಿ ಕಂಚಿನ ಗೆದ್ದು ಟೋಕಿಯೊ-2020ರ ಯಶಸ್ಸನ್ನು ಪುನರಾವರ್ತಿಸಿತು. 1972ರ ಮ್ಯೂನಿಚ್ ಒಲಿಂಪಿಕ್ಸ್​ ಬಳಿಕ ಹಾಕಿ ತಂಡವು ಸತತ ಎರಡು ಕಂಚಿನ ಪದಕಗಳನ್ನು ಜಯಿಸಿತು. ಜಾವೆಲಿನ್ ಎಸೆತದಲ್ಲಿ ಬೆಳ್ಳಿಗೆ ಕೊರಳೊಡ್ಡಿದ ನೀರಜ್ ಚೋಪ್ರಾ ತಮ್ಮ ಒಲಿಂಪಿಕ್ ಪರಂಪರೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಇದರೊಂದಿಗೆ ಭಾರತದ ಅತ್ಯಂತ ಯಶಸ್ವಿ ವೈಯಕ್ತಿಕ ಒಲಿಂಪಿಯನ್ ಆಗಿ ಹೊರಹೊಮ್ಮಿದರು. ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಕಂಚು ಜಯಿಸಿ ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಪದಕ ವಿಜೇತರಾದರು.

ಒಲಿಂಪಿಕ್ಸ್ ಸಮಾರೋಪ ಸಮಾರಂಭ (IANS)

6 ಪದಕಗಳ ಸಾಧನೆ ಹೊರತುಪಡಿಸಿದರೆ, ಭಾರತವು ಪ್ಯಾರಿಸ್ ಒಲಿಂಪಿಕ್ ಹೆಚ್ಚಿನ ಸ್ಪರ್ಧೆಗಳಲ್ಲಿ ನಿರಾಶೆ ಅನುಭವಿಸಿತು. ಕೆಲ ಬಹುನಿರೀಕ್ಷಿತ ಅಥ್ಲೀಟ್‌ಗಳು ತಮ್ಮ ವಿಭಾಗಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರಿಂದ ದೇಶವು 6 ಸಂಭಾವ್ಯ ಪದಕಗಳನ್ನು ಕಳೆದುಕೊಂಡಿತು. ಇದರಲ್ಲಿ ಲಕ್ಷ್ಯ ಸೇನ್, ಮೀರಾಬಾಯಿ ಚಾನು ಮತ್ತು ಮೂರನೇ ಒಲಿಂಪಿಕ್​ ಪದಕ ಜಯಿಸುವ ಸಮೀಪದಲ್ಲಿದ್ದ ಮನು ಭಾಕರ್ ಕೂಡ ಸೇರಿದ್ದಾರೆ. ಅಲ್ಲದೆ, ಮಿಶ್ರ ತಂಡದ ಆರ್ಚರಿ ಜೋಡಿಯಾದ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ಕಂಚಿನ ಪದಕದ ಪಂದ್ಯದಲ್ಲಿ ಸೋತರು. ಆದರೆ ಒಲಿಂಪಿಕ್ ಪದಕದ ಸುತ್ತಿಗೆ ತಲುಪಿದ ಭಾರತದ ಮೊದಲ ಬಿಲ್ಲುಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನ ಸೆಮಿಫೈನಲ್‌ನಲ್ಲಿ ಪರಾಭವಗೊಂಡ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಉತ್ತಮ ಫಾರ್ಮ್‌ನಲ್ಲಿದ್ದರೂ ಪದಕ ಜಯಿಸುವಲ್ಲಿ ವಿಫಲರಾದರು. ಅಲ್ಲದೆ, ಪಿ.ವಿ. ಸಿಂಧು ಸತತ ಮೂರು ಒಲಿಂಪಿಕ್ಸ್‌ ಪದಕಗಳ ಹ್ಯಾಟ್ರಿಕ್ ಸಾಧಿಸುವಲ್ಲಿ ವಿಫಲರಾದರು. ಅನುಭವಿ ಬಿಲ್ಲುಗಾರ್ತಿ ಮತ್ತು ಬಹುಸಮಯದ ಒಲಿಂಪಿಯನ್ ದೀಪಿಕಾ ಕುಮಾರಿ ಅಪಾರ ಅನುಭವ ಮತ್ತು ಯಶಸ್ಸಿನ ಹೊರತಾಗಿಯೂ ಪದಕವಿಲ್ಲದೆ ಮರಳಿದರು. ಟೋಕಿಯೊ 2020ರ ಕಂಚಿನ ಪದಕ ವಿಜೇತರಾದ ಬಾಕ್ಸರ್‌ಗಳಾದ ನಿಖತ್ ಜರೀನ್ ಮತ್ತು ಲೊವ್ಲಿನಾ ಬೊರ್ಗೊಹೈನ್ ದೇಶಕ್ಕೆ ನಿರೀಕ್ಷಿತ ಪದಕ ಗೆಲ್ಲಲಾಗಲಿಲ್ಲ. ಇನ್ನೊಂದೆಡೆ, ಮಹಿಳೆಯರ 50 ಕೆಜಿ ಕುಸ್ತಿಯ ಐತಿಹಾಸಿಕ ಫೈನಲ್‌ ಹಣಾಹಣಿಗೂ ಮುನ್ನ ತೂಕದ ಹೆಚ್ಚಳದಿಂದ ವಿನೇಶ್ ಫೋಗಟ್ ಅನರ್ಹಗೊಂಡಿರುವುದು ದೇಶದ ಜನತೆಗೆ ಭಾರೀ ನಿರಾಸೆ ತರಿಸಿತು.

ಭಾರತೀಯ ಕ್ರೀಡಾಪಟುಗಳು ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ಸೈಲಿಂಗ್, ಶೂಟಿಂಗ್, ಈಜು, ಟೇಬಲ್ ಟೆನ್ನಿಸ್ ಮತ್ತು ಟೆನ್ನಿಸ್ ಸೇರಿದಂತೆ 16 ಕ್ರೀಡೆಗಳ 69 ಪದಕಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಇದನ್ನೂ ಓದಿ:ಕಾಶಿ ವಿಶ್ವನಾಥನಿಗೆ ಒಲಿಂಪಿಕ್​ ಪದಕ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ ಲಲಿತ್​ ಉಪಾಧ್ಯಾಯ - Lalit Upadhyaya

ABOUT THE AUTHOR

...view details