ನವದಹೆಲಿ: ವಿನೇಶ್ ನೀನು ಸೋತಿಲ್ಲ, ನಿನ್ನನ್ನು ಸೋಲಿಸಲಾಗಿದೆ ಎಂದು ವಿನೇಶ್ ಫೋಗಟ್ ನಿವೃತ್ತಿ ಬೆನ್ನಲ್ಲೆ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಜರಂಗ್ ಪುನಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಮಹಿಳಾ ಕುಸ್ತಿ ಪಂದ್ಯ 50 ಕೆಜಿ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ತೋರಿ ಸೊಲಿಲ್ಲದೇ ಫೈನಲ್ ತಲುಪಿದ್ದ ವಿನೇಶ್ ಫೋಗಟ್ 100 ಗ್ರಾಂ ನಷ್ಟು ಅಧಿಕ ತೂಕ ಕಂಡು ಬಂದ ಕಾರಣ ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು. ಇದರಿಂದ ಪದಕ ನಿರೀಕ್ಷೆಯಲ್ಲಿದ್ದ ಫೋಗಟ್ ನಿರಾಸೆ ಅನುಭವಿಸಿದ್ದರು. ಇದರ ಬೆನ್ನಲ್ಲೆ ಇಂದು ಬೆಳಗ್ಗೆ ಕುಸ್ತಿಗೆ ವಿದಾಯ ಘೋಷಿಸಿದ್ದಾರೆ. ವಿನೇಶ್ ಅವರ ಈ ನಿರ್ಧಾರಕ್ಕೆ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಭಜರಂಗ್ ಪುನಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ಭಜರಂಗ್ ಪುನಿಯಾ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, "ವಿನೇಶ್ ನೀನು ಸೋತಿಲ್ಲ, ನಿನ್ನನ್ನು ಸೋಲಿಸಲಾಗಿದೆ. ನಮ್ಮ ಪಾಲಿಗೆ ನೀವು ಎಂದಿಗೂ ವಿಜೇತರೆ ಆಗಿರುತ್ತೀರಿ, ನೀವು ಭಾರತದ ಮಗಳು ಮಾತ್ರವಲ್ಲ, ಭಾರತದ ಹೆಮ್ಮೆಯೂ ಹೌದು ಎಂದು ಬರೆದುಕೊಂಡಿದ್ದಾರೆ.
ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ, "ವಿನೇಶ್ ನೀನು ಸೋತಿಲ್ಲ, ನೀನು ಯಾರಿಗಾಗಿ ಹೋರಾಡಿ ಗೆದ್ದಿದ್ದೀಯೋ ಆ ಮಗಳು ಇಂದು ಸೋತಿದ್ದಾಳೆ. ಇದು ಇಡೀ ಭಾರತ ದೇಶದ ಸೋಲು. ದೇಶ ನಿಮ್ಮೊಂದಿಗಿದೆ. ಆದ್ರೆ ಕುಸ್ತಿಪಟುವಾಗಿ ನಿಮ್ಮ ಹೋರಾಟ ಮತ್ತು ಉತ್ಸಾಹಕ್ಕೆ ನಮ್ಮ ನಮನಗಳು" ಎಂದು ಬರೆದಿದ್ದಾರೆ.
ನೀವೊಬ್ಬ ಉತ್ತಮ ಕುಸ್ತಿಪಟು:ವಿನೇಶ್ ಸಹೋದರಿ ಸಂಗೀತಾ ಫೋಗಟ್ ಕೂಡ ಪ್ರತಿಕ್ರಿಯೆ ನೀಡಿದ್ದು, 'ಬಾಲ್ಯದಿಂದಲೂ, ವಿನೇಶ್ ಫೋಗಟ್ ಒಳ್ಳೆಯ ವಿಷಯಕ್ಕಾಗಿ ಹೋರಾಡುವುದನ್ನು ಮತ್ತು ಪ್ರತಿ ಸೋಲಿನ ನಂತರ ಮತ್ತೆ ಎದ್ದು ಹೋರಾಡುವುದನ್ನು ನಾವು ಕಂಡಿದ್ದೇವೆ! ಆದರೆ ನಿಮ್ಮ ನಿರ್ಧಾರವು ನಮ್ಮನ್ನು ಕುಗ್ಗಿಸಿದೆ. ನೀವೊಬ್ಬ ಶ್ರೇಷ್ಠ ಆಟಗಾರ್ತಿ ಎಂದು ಬರೆದುಕೊಂಡಿದ್ದಾರೆ.
ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ:ಮತ್ತೊಬ್ಬ ಸಹೋದರಿ ರಿತು ಫೋಗಟ್, 'ನಿಮ್ಮ ಕುಸ್ತಿ ಪಯಣ ಮತ್ತು ಸವಾಲುಗಳು ಸದಾ ನೆನಪಿನಲ್ಲಿ ಉಳಿಯುತ್ತವೆ! ನಿಮ್ಮ ಹೆಸರು ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಡುತ್ತದೆ. ನೀವು ಲಕ್ಷಾಂತರ ಹುಡುಗಿಯರ ಸ್ಫೂರ್ತಿ, ಭರವಸೆ ಮತ್ತು ಗೆಲುವು. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದು ಬರೆದಿದ್ದಾರೆ.
ವಿನೇಶ್ ಫೋಗಟ್ ನಿವೃತ್ತಿ ಘೋಷಣೆ:ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪಂದ್ಯದ ಅನರ್ಹಗೊಂಡ ಬೆನ್ನಲ್ಲೆ 29 ವರ್ಷದ ವಿನೇಶ್ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ವಿನೇಶ್ ತಮ್ಮ ಎಕ್ಸ್ ಖಾತೆಯಲ್ಲಿ 'ಅಮ್ಮಾ, ಕುಸ್ತಿಯಲ್ಲಿ ಗೆದ್ದು, ಸೋತಿದ್ದೇನೆ. ನನ್ನನ್ನು ಕ್ಷಮಿಸಿ, ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ, ಎಲ್ಲವೂ ಮುರಿದುಹೋಗಿದೆ. ಈಗ ನನಗೆ ಹೆಚ್ಚಿನ ಶಕ್ತಿ ಇಲ್ಲ. 2001 ರಿಂದ 2024ರ ಸುದೀರ್ಘ ಕುಸ್ತಿ ಪ್ರಯಾಣಕ್ಕೆ ವಿದಾಯ. ನಿಮ್ಮೆಲ್ಲರಿಗೂ ಋಣಿಯಾಗಿರುತ್ತೇನೆ. ನನ್ನನು ಮನ್ನಿಸಿ" ಎಂದು ಬರೆದು ನಿವೃತ್ತಿ ಘೋಷಿಸಿದ್ದರು.
ಹರಿಯಾಣ ಮೂಲದ ಈ ಕುಸ್ತಿಪಟು 3 ಕಾಮನ್‌ವೆಲ್ತ್ ಗೇಮ್ಸ್ಗಳಲ್ಲಿ ಚಿನ್ನದ ಪದಕ, ಎರಡು ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕಗಳು ಮತ್ತು ಒಂದು ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಹೊಂದಿದ್ದಾರೆ. 2021 ರಲ್ಲಿ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹತೆ ಬೆನ್ನಲ್ಲೆ ಮತ್ತೊಂದು ಆಘಾತ: ಶಿಸ್ತು ನಿಯಮ ಉಲ್ಲಂಘಿಸಿದ ಆಂಟಿಮ್ ಒಲಿಂಪಿಕ್ಸ್ನಿಂದ ಹೊರಕ್ಕೆ! - Paris Olympics 2024