ಪ್ಯಾರಿಸ್:ಭಾರತದ ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಇಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಕಿಮ್ ಸೊ ಯೊಂಗ್ ಮತ್ತು ಕಾಂಗ್ ಹೀ ಯೊಂಗ್ ವಿರುದ್ಧ ನೇರ ಗೇಮ್‌ಗಳಲ್ಲಿ ಸೋಲು ಅನುಭವಿಸಿದರು.
ಗುಂಪು ಹಂತದ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರು ಟೋಕಿಯೊ ಪದಕ ವಿಜೇತ ಮತ್ತು 3 ಬಾರಿ ವಿಶ್ವ ಪದಕ ವಿಜೇತ ಕೊರಿಯಾದ ಜೋಡಿ ಕಿಮ್ ಸೋ ಯೊಂಗ್ ಮತ್ತು ಕಾಂಗ್ ಹೀ-ಯೋಗ್ ಅವರನ್ನು ಎದುರಿಸಿದರು. 2023ರಲ್ಲಿ ಈ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತೀಯ ಜೋಡಿ, ಶನಿವಾರ 44 ನಿಮಿಷಗಳ ಪಂದ್ಯದಲ್ಲಿ 18-21 ಮತ್ತು 10-21 ಅಂತರದಲ್ಲಿ ಪರಾಜಯ ಕಂಡಿತು.
ಪೊನ್ನಪ್ಪ ಮತ್ತು ಕ್ರಾಸ್ಟೊ ಆರಂಭಿಕ ಪಂದ್ಯದಲ್ಲಿ ಕೊರಿಯನ್ನರಿಗೆ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಲಯ ಕಾಯ್ದುಕೊಳ್ಳುವಲ್ಲಿ ವಿಫಲರಾದರು.
ಈ ಜೋಡಿ ಸೋಮವಾರ ನಾಲ್ಕನೇ ಶ್ರೇಯಾಂಕದ ಚಿಹಾರು ಶಿಡಾ ಮತ್ತು ಜಪಾನ್‌ನ ನಮಿ ಮತ್ಸುಯಾಮಾ ಅವರನ್ನು ಎದುರಿಸಲಿದೆ.
ಮಹಿಳಾ ಬಾಕ್ಸಿಂಗ್ನಲ್ಲಿ ಗೆಲುವು:ಶುಕ್ರವಾರ ರಾತ್ರಿ ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆ ನಡೆಯಿತು. 54 ಕೆ.ಜಿ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರೀತಿ ಪವಾರ್ ಅವರು ವಿಯೆಟ್ನಾಂನ ವೊ ಕಿಮ್ ಅನ್ಹ್ ಅವರನ್ನು ಮಣಿಸಿದರು. ಕಿಮ್ ಅನ್ಹ್ ವಿರುದ್ಧ 5-0 ಅಂತರದಿಂದ ಗೆಲ್ಲುವ ಮೂಲಕ ಪ್ರೀತಿ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ, ಬ್ಯಾಡ್ಮಿಂಟನ್‌ನ ಸಿ ಗುಂಪಿನ ಪಂದ್ಯದಲ್ಲಿ ಲಕ್ಷ್ಯ ಸೇನ್ ಟೋಕಿಯೊ 2020 ಒಲಿಂಪಿಕ್ಸ್ ಸೆಮಿಫೈನಲಿಸ್ಟ್ ಗ್ವಾಟೆಮಾಲಾದ ಕೆವಿನ್ ಕಾರ್ಡನ್ ಅವರನ್ನು ಎದುರಿಸಿದರು. ಈ ಪಂದ್ಯದಲ್ಲಿ ಲಕ್ಷ್ಯ ಕೆವಿನ್‌ಗೆ ಯಾವುದೇ ಅವಕಾಶ ನೀಡಲಿಲ್ಲ. ಮೊದಲ ಸೆಟ್‌ನಲ್ಲಿ 21-8ರಿಂದ ಜಯ ಸಾಧಿಸಿದರು. ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿರುವ ಲಕ್ಷ್ಯ, ಎರಡನೇ ಸೆಟ್‌ನಲ್ಲಿ ಸ್ವಲ್ಪ ಪ್ರಯಾಸಪಟ್ಟರೂ ಗೆಲುವು ಬಿಟ್ಟುಕೊಡಲಿಲ್ಲ. ಮೊದಲ ಸೆಟ್ ಅನ್ನು ಕೇವಲ 14 ನಿಮಿಷಗಳಲ್ಲಿ ಗೆದ್ದುಕೊಂಡಿರುವುದು ಗಮನಾರ್ಹ.
ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಗೆದ್ದು ಬೀಗಿತು. ಇಬ್ಬರೂ ಈ ಬಾರಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಮೂರನೇ ಶ್ರೇಯಾಂಕದ ಸಾತ್ವಿಕ್-ಚಿರಾಗ್ 21-17, 21-14ರಲ್ಲಿ ಫ್ರೆಂಚ್ ಜೋಡಿಯನ್ನು ಸೋಲಿಸಿದ್ದಾರೆ. ಮುಂದಿನ ಪಂದ್ಯದಲ್ಲಿ (ಜುಲೈ 29) ಜರ್ಮನ್ ಜೋಡಿಯನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ:ಪ್ಯಾರಿಸ್ ಒಲಿಂಪಿಕ್ಸ್ 2024: ಇಂದಿನ ವೇಳಾಪಟ್ಟಿ, ಮೊದಲ ಪದಕ ನಿರೀಕ್ಷೆಯಲ್ಲಿ ಭಾರತ - Paris Olympics Day 2
ಹಾಕಿಯಲ್ಲಿ ಭಾರತಕ್ಕೆ ರೋಚಕ ಜಯ:ಇನ್ನುದಿನದ ಉಳಿದ ಫಲಿತಾಂಶಗಳನ್ನು ಗಮನಿಸುವುದಾದರೆ, ಶೂಟರ್ ಮನು ಭಾಕರ್ ಫೈನಲ್ ಪ್ರವೇಶಿಸಿದ್ದಾರೆ. ಟೇಬಲ್ ಟೆನಿಸ್ ಆಟಗಾರ ಹರ್ಮೀತ್ ದೇಸಾಯಿ ಕೂಡ ತಮ್ಮ ಮೊದಲ ಪಂದ್ಯ ಗೆದ್ದಿದ್ದಾರೆ. ಹಾಕಿ ತಂಡವೂ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 3-2 ಅಂತರದಿಂದ ಸೋಲಿಸಿತು.