ಪ್ಯಾರಿಸ್:ಬ್ರಿಟನ್‌ನ ಮಾಜಿ ವಿಶ್ವ ನಂ.1 ಟೆನಿಸ್ ಆಟಗಾರ ಆಂಡಿ ಮರ್ರೆ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮರ್ರೆ ಕಳೆದ ಮಂಗಳವಾರ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ನಂತರ ನಿವೃತ್ತಿ ಘೋಷಿಸುತ್ತೇನೆ ಎಂದು ಪ್ರಕಟಿಸಿದ್ದರು. ಈ ಘೋಷಣೆ ಬಳಿಕ ಗುರುವಾರ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಮರ್ರೆ ತಮ್ಮ ಹೆಸರನ್ನು ಹಿಂಪಡೆದುಕೊಂಡಿದ್ದಾರೆ. ಆದರೆ, ಅವರು ದೇಶದ ಪರ ಡಬಲ್ಸ್‌ನಲ್ಲಿ ಭಾಗವಹಿಸಲಿದ್ದಾರೆ.
‘‘ಸಿಂಗಲ್ಸ್ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ, ಆದರೆ ಡಬಲ್ಸ್‌ನಲ್ಲಿ ಆಡುತ್ತೇನೆ. ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಡಾನ್ ಇವಾನ್ಸ್ ಪುರುಷರ ಡಬಲ್ಸ್‌ನಲ್ಲಿ ಜತೆಗಾರರಾಗಿದ್ದಾರೆ. ಇದು ತನ್ನ ಮೂರನೇ ಒಲಿಂಪಿಕ್ ಆಗಿದ್ದು, ಪದಕಕ್ಕಾಗಿ ಉತ್ತಮ ಆರಂಭ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿರುವ ಆಂಡಿ ಮರ್ರೆ, ಸಿಂಗಲ್ಸ್‌ನಿಂದ ಹಿಂದೆ ಸರಿಯುತ್ತಿರುವುದನ್ನು ಇದೇ ವೇಳೆ ದೃಢೀಕರಿಸಿದರು. 'ಡಾನ್ ಜೊತೆಗಿನ ಡಬಲ್ಸ್‌ನಲ್ಲಿ ಉತ್ತಮ ಪ್ರದರ್ಶನಕ್ಕಾಗಿ ನಾನು ಸಿಂಗಲ್ಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ನಮ್ಮ ಅಭ್ಯಾಸವು ಅತ್ಯುತ್ತಮವಾಗಿದೆ ಮತ್ತು ನಾವು ಒಟ್ಟಿಗೆ ಚೆನ್ನಾಗಿ ಆಡುತ್ತಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದರು. ಎರಡು ಬಾರಿ ಒಲಿಂಪಿಕ್ ಚಿನ್ನ ಗೆದ್ದಿದ್ದ ಆಟಗಾರ ಮರ್ರೆ ಆಗಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ವೇಳೆ ಗ್ರಾಸ್ ಕೋರ್ಟ್ ನಲ್ಲಿ ಮೊದಲ ಚಿನ್ನದ ಪದಕ ಗೆದ್ದು ದೇಶಕ್ಕೆ ತಮ್ಮದೇ ಕೊಡುಗೆ ನೀಡಿದ್ದರು. ಫೈನಲ್‌ನಲ್ಲಿ ಅವರು ಸ್ವಿಸ್ ದಂತಕಥೆ ರೋಜರ್ ಫೆಡರರ್ ಅವರನ್ನು ಮೂರು ಸೆಟ್‌ಗಳಲ್ಲಿ ಸೋಲಿಸಿ, ಈ ಪದಕಕ್ಕೆ ಭಾಜನರಾಗಿದ್ದರು. ಆ ಬಳಿಕ ಅವರು ರಿಯೊ ಒಲಿಂಪಿಕ್ಸ್ 2016 ರ ಫೈನಲ್‌ನಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಎರಡು ಒಲಿಂಪಿಕ್ ಸಿಂಗಲ್ಸ್ ಚಿನ್ನದ ಪದಕಗಳನ್ನು ಗೆದ್ದ ಮೊದಲ ಪುರುಷ ಟೆನಿಸ್ ಆಟಗಾರರು ಎಂಬ ಹೆಗ್ಗಳಿಕೆಯೂ ಮರ್ರೆ ಅವರಿಗಿದೆ.
3 ಗ್ರಾಂಡ್ ಸ್ಲಾಮ್ಗಳ ಸರದಾರ:ಇದಲ್ಲದೇ ಮರ್ರೆ 3 ಗ್ರ್ಯಾಂಡ್ಸ್ಲಾಮ್ ವಶಪಡಿಸಿಕೊಂಡಿದ್ದಾರೆ. 2013 ಮತ್ತು 2016ರಲ್ಲಿ ಎರಡು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಸಾಧನೆಯೂ ಇವರ ಹೆಗಲಿಗಿದೆ. ಅದೇ ಸಮಯದಲ್ಲಿ, ಅವರು 2012 ರಲ್ಲಿ ಅಮೆರಿಕನ್ ಓಪನ್ ವಿಜೇತರೂ ಆಗಿದ್ದಾರೆ. ಆಂಡಿ ಮರ್ರೆ 5 ಬಾರಿ ಆಸ್ಟ್ರೇಲಿಯ ಓಪನ್‌ನ ಫೈನಲ್‌ಗೆ ತಲುಪಿದ ಹೆಗ್ಗಳಿಕೆ ಹೊಂದಿದ್ದಾರೆ. ಆದರೆ ಒಮ್ಮೆಯೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.
ಇದನ್ನು ಓದಿ:ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ವಿಶ್ವ ನಂ1 ಟೆನಿಸ್ ಆಟಗಾರ ಸಿನ್ನರ್ - Jannik Sinner