ನ್ಯೂಯಾರ್ಕ್ (ಯುಎಸ್):ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ವೈಫಲ್ಯತೆ ಮುಂದುವರೆದಿದೆ. ರೋಹಿತ್ ಪಡೆ ವಿರುದ್ಧ 6 ರನ್‌ಗಳ ಸೋಲಿನ ಬಳಿಕ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಕೆಲ ಕಾರಣಗಳನ್ನು ನೀಡಿದ್ದಾರೆ. ತಂಡವು ಒಂದರ ಹಿಂದೊಂದರಂತೆ ವಿಕೆಟ್ ಕಳೆದುಕೊಳ್ಳುತ್ತ, ಹೆಚ್ಚು ಡಾಟ್ ಬಾಲ್ ಆಡಿರುವುದೇ ಸೋಲಲು ಕಾರಣ ಎಂದು ಬಾಬರ್ ಹೇಳಿದ್ದಾರೆ. ಉತ್ತಮ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ಪಾಕ್ ತಂಡ ಬ್ಯಾಟಿಂಗ್ ವೈಫಲ್ಯದಿಂದ ವಿಶ್ವಕಪ್ನಲ್ಲಿ ಮತ್ತೊಂದು ಸೋಲುಂಡಿದೆ.
ಭಾರತದ ಪರ ಮಿಂಚಿನ ದಾಳಿ ನಡೆಸಿದ ವೇಗಿ ಜಸ್ಪ್ರೀತ್ ಬುಮ್ರಾ (14ಕ್ಕೆ 3) ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (24ಕ್ಕೆ 2) ಪಾಕ್ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾನುವಾರ ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ನೀಡಿದ 120 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ 6 ರನ್ ಅಂತರದ ಸೋಲಿಗೆ ಶರಣಾಯಿತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಬಾಬರ್ ಅಜಮ್, "ನಾವು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದೆವು. ಆದರೆ, ಬ್ಯಾಟಿಂಗ್‌ನಲ್ಲಿ ನಿರಂತರ ವಿಕೆಟ್ ಕಳೆದುಕೊಳ್ಳುವ ಜೊತೆಗೆ, ಹೆಚ್ಚಿನ ಡಾಟ್ ಬಾಲ್ ಆಡಿದ್ದರಿಂದ ಸೋಲುವಂತಾಯಿತು. ನಾವು ಸರಳ ಬ್ಯಾಟಿಂಗ್ ತಂತ್ರದೊಂದಿಗೆ ಮೈದಾನಕ್ಕಳಿದೆವು. ಬ್ಯಾಟಿಂಗ್ ಸ್ಟ್ರೈಕ್ ಬದಲಾಯಿಸುತ್ತ ಆಗಾಗ ಬೌಂಡರಿ ಗಳಿಸುವುದು ನಮ್ಮ ಯೋಜನೆಯಾಗಿತ್ತು. ಆದರೆ, ಇನ್ನಿಂಗ್ಸ್ನ ದ್ವಿತೀಯಾರ್ಧದಲ್ಲಿ ಬಹಳಷ್ಟು ಡಾಟ್ ಬಾಲ್ ಆಡಿದೆವು. ಮೊದಲ ಆರು ಓವರ್‌ಗಳಲ್ಲಿ ಹೆಚ್ಚಿನ ರನ್ ಬಾರಿಸುವ ಪ್ಲಾನ್ ಮಾಡಿದ್ದೆವು. ಆದರೆ, ವಿಕೆಟ್ ಕಳೆದುಕೊಂಡಿದ್ದಲ್ಲದೇ, ರನ್ ಗಳಿಸದಿರುವುದು ನಾವು ಪುಟಿದೇಳಲಾಗದೆ ಸೋತೆವು'' ಎಂದರು.