ನ್ಯೂಯಾರ್ಕ್:ಮಂಗಳವಾರ ಇಲ್ಲಿನ ನಸ್ಸೌ ಕೌಂಟಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಕೆನಡಾ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿರುವ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನ ಸೂಪರ್-8 ಹಂತಕ್ಕೇರುವ ಕನಸು ಜೀವಂತವಾಗಿರಿಸಿಕೊಂಡಿದೆ. ಟೂರ್ನಿಯ ಮೊದಲೆರಡೂ ಪಂದ್ಯ ಸೋತ ಬಾಬರ್ ಪಡೆ, ಮೊದಲ ಗೆಲುವಿನ ನಗೆ ಬೀರಿತು.
ಮತ್ತೊಂದು ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಪಾಕಿಸ್ತಾನವು ಗೆದ್ದು ಎರಡು ಅಂಕ ಗಳಿಸುವಲ್ಲಿ ಯಶಸ್ವಿಯಾಯಿತು. ಮೊಹಮ್ಮದ್ ರಿಜ್ವಾನ್ 53* ರನ್ ನೆರವಿನಿಂದ ಪಾಕಿಸ್ತಾನವು 17.3 ಓವರ್‌ಗಳಲ್ಲಿ ಕೆನಡಾ ನೀಡಿದ್ದ 107 ರನ್ ಗುರಿಯನ್ನು ಬೆನ್ನಟ್ಟಿತು. 7 ವಿಕೆಟ್‌ಗಳ ಗೆಲುವಿನಿಂದ ತಂಡದ ನಿವ್ವಳ ರನ್ ರೇಟ್ ಕೂಡ ಸುಧಾರಣೆ ಕಂಡಿದ್ದು, 0.19ಕ್ಕೆ ತಲುಪಿದೆ. ಮತ್ತೊಂದೆಡೆ, ಅಮೆರಿಕ ತಂಡವು 0.63 ರನ್ ದರ ಹೊಂದಿದೆ.
ಪಾಕ್ ಬ್ಯಾಟಿಂಗ್:ಕೆನಡಾ ನೀಡಿದ 107 ರನ್ ಗುರಿ ಬೆನ್ನಟ್ಟಿದ ಪಾಕ್ಗೆ ಉತ್ತಮ ಆರಂಭ ಸಿಗಲಿಲ್ಲ. ಸೈಮ್ ಅಯೂಬ್ ಕೇವಲ 6 ರನ್ಗೆ ಔಟಾದರು. ಬಳಿಕ ಒಂದಾದ ನಾಯಕ ಬಾಬರ್ ಅಜಂ (33) ಹಾಗೂ ಮೊಹಮದ್ ರಿಜ್ವಾನ್ 2ನೇ ವಿಕೆಟ್ಗೆ 63 ರನ್ ಸೇರಿಸಿದರು. ಈ ಹಂತದಲ್ಲಿ ಬಾಬರ್, ದಿಲ್ಲನ್ ಹೇಲಿಗರ್ ಬೌಲಿಂಗ್ನಲ್ಲಿ ಶ್ರೇಯಸ್ ಮೊವ್ವಾಗೆ ಕ್ಯಾಚ್ ನೀಡಿ ಹೊರನಡೆದರು. ಬಳಿಕ ಬಂದ ಫಖಾರ್ ಜಮಾನ್ 4 ರನ್ಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ, ಅಜೇಯ ಅರ್ಧಶತಕ ಗಳಿಸಿದ ರಿಜ್ವಾನ್ (53*), ಉಸ್ಮಾನ್ ಖಾನ್ (2) ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಬಾಬರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ಗಿಳಿದ ಕೆನಡಾ ತಂಡ, ಪಾಕ್ ವೇಗದ ಬೌಲಿಂಗ್ ದಾಳಿಗೆ ಸಿಲುಕಿ ರನ್ ಗಳಿಸಲು ಪರದಾಡಿತು. ಆರಂಭಿಕ ಆಟಗಾರ ಆರೋನ್ ಜಾನ್ಸನ್ ಅರ್ಧಶತಕದ (52) ಹೊರತುಪಡಿಸಿ ಉಳಿದ ಬ್ಯಾಟರ್ಗಳು ವಿಫಲರಾದರು.