ನವದೆಹಲಿ: ನೆರೆಯ ರಾಷ್ಟ್ರ ಪಾಕಿಸ್ತಾನವು ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದೆ. ಹಣದುಬ್ಬರದಿಂದ ಅಲ್ಲಿಯ ಜನಜೀವನ ದುಸ್ತರವಾಗಿದ್ದು, ಸರ್ಕಾರ ಲಕ್ಷಾಂತರ ಕೋಟಿ ಸಾಲದಲ್ಲಿ ಮುಳುಗಿದೆ. ಪಾಕಿಸ್ತಾನದ ದುಸ್ಥಿತಿಗೆ ಮತ್ತೊಂದು ನಿದರ್ಶನವೊಂದು ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಪಾಕಿಸ್ತಾನ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024ರಲ್ಲಿ ಭಾಗವಹಿಸಲು ಚೀನಾಗೆ ತೆರಳಲು, ವಿಮಾನ ಟಿಕೆಟ್ಗಾಗಿ ಸಾಲ ಪಡೆದುಕೊಂಡಿದೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿಗಾಗಿ ಚೀನಾಗೆ ತೆರಳಲು ಪಾಕಿಸ್ತಾನ ತಂಡ ಸಾಲ ತೆಗೆದುಕೊಂಡಿರುವುದಾಗಿ ಬಯಲಾಗಿದೆ. ಈ ಬಗ್ಗೆ ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್‌ಎಫ್) ಅಧ್ಯಕ್ಷ ತಾರಿಕ್ ಬುಗ್ತಿ ಅವರು ಬಿಬಿಸಿಗೆ ಈ ಬಗ್ಗೆ ದೃಢಪಡಿಸಿದ್ದು, ತಂಡವು ಸಾಲದ ಹಣದಲ್ಲಿ ಚೀನಾಗೆ ಪ್ರಯಾಣಿಸುತ್ತಿದೆ ಎಂದಿದ್ದಾರೆ. ಶೀಘ್ರದಲ್ಲೇ ಹಣ ಬರುವ ನಿರೀಕ್ಷೆಯಿದೆ. ಹಾಕಿ ಕ್ರೀಡೆಗೆ ಆರ್ಥಿಕ ಬೆಂಬಲ ನೀಡುವಂತೆ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಬುಗ್ತಿ ಮನವಿ ಮಾಡಿದ್ದಾರೆ.