ಫ್ಲೋರಿಡಾ (ಯುಎಸ್‌ಎ):ಇಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಮೈದಾನದಲ್ಲಿ ಭಾನುವಾರ ಐರ್ಲೆಂಡ್ ವಿರುದ್ಧ ಮೂರು ವಿಕೆಟ್‌ಗಳ ಪ್ರಯಾಸದ ಜಯದೊಂದಿಗೆ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿತು. 2009ರ ಚಾಂಪಿಯನ್ ಪಾಕಿಸ್ತಾನವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಔಪಚಾರಿಕ ಪಂದ್ಯದಲ್ಲಿ ಜಯ ಕಂಡಿತು. ಡಿ ಗ್ರೂಪ್ ಪಂದ್ಯಗಳಲ್ಲಿ ಭಾರತ ಮತ್ತು ಯುಎಸ್ ವಿರುದ್ಧ ಸೋತ ಬಳಿಕ ಪಾಕ್ ಸೂಪರ್-8 ಕನಸು ಕಮರಿತ್ತು.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಎದುರಾಳಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಆದರೆ ಶಾಹೀನ್ ಶಾ ಆಫ್ರಿದಿ (22/3) ಹಾಗೂ ಇಮಾದ್ ವಾಸಿಂ (8/3) ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಐರ್ಲೆಂಡ್ 9 ವಿಕೆಟ್‌ಗೆ 106 ಮಾತ್ರ ಗಳಿಸಲು ಶಕ್ತವಾಯಿತು. ತಂಡದ ಮೊತ್ತ 32 ರನ್ ಆಗುವಷ್ಟರಲ್ಲೇ ಐರ್ಲೆಂಡ್ನ 6 ವಿಕೆಟ್ ಉರುಳಿದ್ದು, ಪ್ರಮುಖ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಾಯಕ ಪಾಲ್ ಸ್ಟಿರ್ಲಿಂಗ್ 1, ಆಂಡ್ರ್ಯೂ ಬಾಲ್ಬಿರ್ನಿ 0, ವಿಕೆಟ್ ಕೀಪರ್ ಲೋರ್ಕನ್ ಟಕ್ಕರ್ 2, ಹ್ಯಾರಿ ಟೆಕ್ಟರ್ 0, ಕರ್ಟಿಸ್ ಕ್ಯಾಂಫರ್ 7 ಹಾಗೂ ಜಾರ್ಜ್ ಡಾಕ್ರೆಲ್ 11 ರನ್ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಒಂದಾದ ಗರೆಥ್ ಡೆಲಾನಿ (31) ಹಾಗೂ ಮಾರ್ಕ್ ಅಡೇರ್(15) 44 ರನ್ ಜೊತೆಯಾಟವಾಡಿ ತಂಡವನ್ನು ಭಾರಿ ಒತ್ತಡದಿಂದ ಪಾರು ಮಾಡಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಜೋಶುವಾ ಲಿಟಲ್ 22 ರನ್ ಕಾಣಿಕೆ ನೀಡಿ ಐರ್ಲೆಂಡ್ ತಂಡವನ್ನು ನೂರರ ಗಡಿ ದಾಟಿಸಿದರು. ಪಾಕ್ ಪರ ಶಾಹೀನ್ ಶಾ ಆಫ್ರಿದಿ 22ಕ್ಕೆ 3, ಅಮಿರ್ 11ಕ್ಕೆ 2 ಹಾಗೂ ಇಮಾದ್ ವಾಸಿಂ 8 ರನ್ಗೆ 3 ವಿಕೆಟ್ ಪಡೆದರು.