ಹೈದರಾಬಾದ್: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ (ODI) ಸರಣಿ ನಡೆಯುತ್ತಿದೆ. ಎರಡನೇ ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತದ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆಸೀಸ್ ಅಲ್ಪಮೊತ್ತಕ್ಕೆ ಸರ್ವಪತನ ಕಂಡಿತ್ತು. ಪಾಕಿಸ್ತಾನದ ಬೌಲಿಂಗ್ ದಾಳಿ ಎದುರಿಸಲು ಆಸೀಸ್ ಆಟಗಾರರು ವಿಫಲರಾದರು. ಸ್ಟೀವ್ ಸ್ಮಿತ್ (35) ಹೊರತು ಪಡಿಸಿ ಉಳಿದ ಆಟಗಾರರು ಕನಿಷ್ಠ 20 ರನ್ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕರಾಗಿ ಬಂದ ಜೇಕ್ ಫ್ರೆಸರ್ (13) ಮತ್ತು ಮ್ಯಾಥ್ಯು ಶಾರ್ಟ್ (19) ಶಹೀನ್ ಆಫ್ರಿದಿ ಬೌಲಿಂಗ್ ಬಲೆಗೆ ಬಿದ್ದು ಬಹುಬೇಗ ನಿರ್ಗಮಿಸಿದರು.
ನಂತರ ಬಂದ ಆಟಗಾರರು ಕ್ರೀಸ್ಗೆ ಕಚ್ಚಿಕೊಳ್ಳಲು ಸಾಧ್ಯವಾಗದೇ ಪೆವಿಲಿಯನ್ ಪರೆಡ್ ಮಾಡಿದರು. ಜೋಶ್ ಇಂಗ್ಲಿಸ್ (18), ಲ್ಯಾಬುಸ್ಚಾಗ್ನೆ (6), ಹರ್ಡಿ (14), ಮ್ಯಾಕ್ಸ್ವೆಲ್(16), ಕಮಿನ್ಸ್ (13), ಸ್ಟಾರ್ಕ್ (1), ಜಾಂಪ (18) ರನ್ಗಳಿಸುವಲ್ಲಿ ವಿಫಲರಾದರು. ಇದರೊಂದಿಗೆ ಪಾಕಿಸ್ತಾನಕ್ಕೆ 163 ರನ್ಗಳ ಸಾಮಾನ್ಯ ಗುರಿ ನೀಡಿತು.
ಇದನ್ನು ಬೆನ್ನಟಿದ ಪಾಕ್, ಆರಂಭಿಕ ಬ್ಯಾಟರ್ಗಳಾದ ಅಯ್ಯೂಬ್ (82) ಮತ್ತು ಅಬ್ದುಲ್ಲಾ ಶಫಿಖ್ (64) ಬ್ಯಾಟಿಂಗ್ ನೆರವಿನಿಂದ 1 ವಿಕೆಟ್ ಕಳೆದುಕೊಂಡು ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ 1-1 ಅಂತರದಿಂದ ಸರಣಿ ಸಮಬಲ ಸಾಧಿಸಿದ ಪಾಕ್ ಭಾರತದ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದೆ.