ICC Champions Trophy Golden Bat Winners:ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಪ್ರಾರಂಭವಾಗಿ 5 ಪಂದ್ಯಗಳು ಮುಕ್ತಾಯಗೊಂಡಿವೆ. ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಟೀಂ ಇಂಡಿಯಾ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಭಾನುವಾರ ನ್ಯೂಜಿಲೆಂಡ್ ವಿರುದ್ಧ ಗ್ರೂಪ್ ಹಂತದ ಕೊನೆಯ ಪಂದ್ಯವನ್ನಾಡಲಿದೆ. ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದಿರುವ ಭಾರತ ಮೂರನೇ ಬಾರಿಗೆ ಕಪ್ ಗೆಲ್ಲುವತ್ತ ದೃಷ್ಟಿ ನೆಟ್ಟಿದೆ. ಮತ್ತೊಂದೆಡೆ 8 ವರ್ಷಗಳ ಬಳಿಕ ನಡೆಯುತ್ತಿರುವ ಈ ಟೂರ್ನಿಯಲ್ಲಿ ಗೊಲ್ಡನ್ ಬ್ಯಾಟ್ ಗೆಲ್ಲುವವರು ಯಾರು ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಗೋಲ್ಡನ್ ಬ್ಯಾಟ್ ಪ್ರಶಸ್ತಿ ಎಂದರೇನು?:ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಟೂರ್ನಿ ಬಳಿಕ ಈ ಪ್ರಶಸ್ತಿ ನೀಡಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಚಾಂಪಿಯನ್ಸ್ ಟ್ರೋಫಿಯಲ್ಲಿ ಈವರೆಗೂ ಮೂವರು ಭಾರತೀಯ ಕ್ರಿಕೆಟರ್ಗಳು ಗೋಲ್ಡನ್ ಬ್ಯಾಟ್ ಗೆದ್ದಿದ್ದಾರೆ. ಅದರಲ್ಲಿ ಓರ್ವ ಸ್ಟಾರ್ ಪ್ಲೇಯರ್ ಸತತ ಎರಡು ಸೀಸನ್ನಲ್ಲಿ ಗೋಲ್ಡನ್ ಬ್ಯಾಟ್ ಪ್ರಶಸ್ತಿ ಪಡೆದು ದಾಖಲೆ ಬರೆದಿದ್ದಾರೆ.
ಗೋಲ್ಡನ್ ಬ್ಯಾಟ್ ಗೆದ್ದ ಭಾರತೀಯರು:2000ನೇ ಇಸವಿಯಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೌರವ್ ಗಂಗೂಲಿ ಅತೀ ಹೆಚ್ಚು ರನ್ (348) ಗಳಿಸಿ ಗೋಲ್ಡನ್ ಬ್ಯಾಟ್ ಪಡೆದಿದ್ದರು. 2002ರಲ್ಲಿ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ 271 ರನ್ ಗಳಿಸಿ ಈ ಪ್ರಶಸ್ತಿ ಪಡೆದುಕೊಂಡಿದ್ದರು. ಆದರೆ, ಶಿಖರ್ ಧವನ್ ಮಾತ್ರ ಸತತ ಎರಡು ಬಾರಿ ಈ ಪ್ರಶಸ್ತಿ ಪಡೆದು ದಾಖಲೆ ಬರೆದಿದ್ದಾರೆ. ಇವರನ್ನು ಹೊರತುಪಡಿಸಿ ಬೇರೆ ಯಾವೊಬ್ಬ ಪ್ಲೇಯರ್ ಸತತ ಎರಡು ಬಾರಿ ಗೋಲ್ಡನ್ ಬ್ಯಾಟ್ ಪಡೆಯಲು ಸಾಧ್ಯವಾಗಿಲ್ಲ.