ಪ್ಯಾರಿಸ್(ಫ್ರಾನ್ಸ್): ಭಾರತದ ಪುರುಷರ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೋಲು ಅನುಭವಿಸಿದೆ. ಗುರುವಾರ ನಡೆದ ಪೂಲ್-ಬಿ ಗುಂಪಿನ ಹಂತದ ಪಂದ್ಯದಲ್ಲಿ ಬೆಲ್ಜಿಯಂ 2-1 ಗೋಲುಗಳ ಅಂತರದಿಂದ ಭಾರತವನ್ನು ಸೋಲಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಟೇಬಲ್ ಟಾಪರ್ ಆಗಿ ಆಟ ಮುಂದುವರೆಸಿದೆ.
ಬೆಲ್ಜಿಯಂ ಪರ ತಿಬ್ಯು ಸ್ಟಾಕ್‌ಬ್ರೋಕ್ಸ್ (33ನೇ ನಿಮಿಷ) ಮತ್ತು ಜಾನ್-ಜಾನ್ ಡೊಹ್ಮೆನ್ (44ನೇ ನಿಮಿಷ) ಗೋಲು ಗಳಿಸಿದರೆ, ಭಾರತದ ಪರ 18ನೇ ನಿಮಿಷದಲ್ಲಿ ಅಭಿಷೇಕ್ ಏಕೈಕ ಗೋಲು ಹೊಡೆದರು.
ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡಕ್ಕೆ ಇದು ಮೊದಲ ಸೋಲು. ಕಳೆದ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತ ಭಾರತ ಪ್ಯಾರಿಸ್‌ನಲ್ಲಿ ತನ್ನ ಕೊನೆಯ 3 ಪಂದ್ಯಗಳ ಪೈಕಿ 2ರಲ್ಲಿ ಗೆದ್ದಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 3-2 ಗೋಲುಗಳ ಅಂತರದಿಂದ ಸೋಲಿಸಿತ್ತು. ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2-0ರ ಅಂತರದಿಂದ ಜಯಿಸಿತ್ತು. ಅರ್ಜೆಂಟೀನಾ ವಿರುದ್ಧದ ಪಂದ್ಯ 1-1ರಿಂದ ಡ್ರಾನಲ್ಲಿ ಕೊನೆಗೊಂಡಿತ್ತು.