ನವದೆಹಲಿ:ಐದು ಬಾರಿಯ ಒಲಿಂಪಿಯನ್ ಮತ್ತು ವೆನೆಜುವೆಲಾದ ಮಾಜಿ ಒಲಿಂಪಿಕ್ಸ್ ಅಥ್ಲೀಟ್ ಡೇನಿಯಲಾ ಲಾರಿಯಲ್ ಚಿರಿನೋಸ್ (50) ಎಂಬವರು ಶ್ವಾಸನಾಳದಲ್ಲಿ ಆಹಾರ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಒಲಿಂಪಿಕ್ಸ್ ಸೈಕ್ಲಿಸ್ಟ್ ಆಗಿದ್ದ ಡೇನಿಯೆಲಾ ಅಮೆರಿಕದ ಲಾಸ್ ವೇಗಾಸ್ನಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಫಾಕ್ಸ್ ಸ್ಪೋರ್ಟ್ಸ್ ವರದಿ ಮಾಡಿದೆ.
ಡೇನಿಯಲಾ ಲಾರಿಯಲ್ ಚಿರಿನೋಸ್ (AFP) ಡೇನಿಯಾಲ್ ಅವರು ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದೊಂದು ವಾರದಿಂದ ಕೆಲಸಕ್ಕೆ ಗೈರಾಗಿದ್ದರು. ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು.
ಈ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಅಪಾರ್ಟ್ಮೆಂಟ್ನಲ್ಲಿ ಅಥ್ಲೀಟ್ನ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಮರಣೋತ್ತರ ವರದಿಯಲ್ಲಿ, ಶ್ವಾಸನಾಳದಲ್ಲಿ ಆಹಾರ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಎಂದು ತಿಳಿದು ಬಂದಿದೆ.
ವೆನೆಜುವೆಲಾದ ಒಲಿಂಪಿಕ್ ಸಮಿತಿ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಾವಿನ ಸುದ್ದಿಯನ್ನು ದೃಢಪಡಿಸಿದೆ. ಸ್ಪ್ಯಾನಿಷ್ ಭಾಷೆಯಲ್ಲಿ ಮಾಡಿರುವ ಈ ಪೋಸ್ಟ್ನಲ್ಲಿ, ವೆನೆಜುವೆಲಾದ ಒಲಿಂಪಿಕ್ ಸಮಿತಿ ನಿರ್ದೇಶಕರ ಮಂಡಳಿಯು ಡೇನಿಯಲಾ ಲಾರಿಯಲ್ ಅವರ ಆಕಸ್ಮಿಕ ಸಾವಿಗೆ ವಿಷಾದಿಸುತ್ತೇವೆ. ಐದು ಒಲಿಂಪಿಕ್ ಕ್ರೀಡಾಕೂಟಗಳ ಟ್ರ್ಯಾಕ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅವರು ಭಾಗಿಯಾಗಿದ್ದರು, ನಾಲ್ಕು ಒಲಂಪಿಕ್ಸ್ ಡಿಪ್ಲೊಮಾಗಳನ್ನು ಗೆದ್ದುಕೊಂಡಿದ್ದರು. ಅವರ ಈ ಗೆಲುವು ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ.