ಲಂಡನ್(ಇಂಗ್ಲೆಂಡ್):ಟೆನಿಸ್ ಲೋಕದ ದಿಗ್ಗಜ, ದಾಖಲೆಯ 24 ಗ್ರ್ಯಾಂಡ್ ಸ್ಲಾಮ್ ಒಡೆಯ ಸರ್ಬಿಯಾದ ನೊವಾಕ್ ಜೊಕೊವಿಕ್ ಎಟಿಪಿ ರ್ಯಾಂಕಿಂಗ್ನಲ್ಲೂ ದಾಖಲೆ ಸೃಷ್ಟಿಸಿದ್ದಾರೆ. ವಿಶ್ವದ ನಂ.1 ಟೆನಿಸ್ಸಿಗನಾಗಿ 419 ವಾರಗಳನ್ನು ಪೂರೈಸಿರುವ ಅವರು, ವಿಶ್ವದ ಅತಿ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
36 ವರ್ಷ 321 ದಿನದ ನೊವಾಕ್ ಎಟಿಪಿ ರ್ಯಾಂಕಿಂಗ್ನಲ್ಲಿ ವಿಶ್ವ ನಂಬರ್ 1 ಸ್ಥಾನದಲ್ಲಿದ್ದಾರೆ. ಟೆನಿಸ್ ಲೋಕದಲ್ಲಿ ಅಚ್ಚಳಿಯದ ಸಾಧನೆ ತೋರಿರುವ ಆಟಗಾರ, ಸ್ವಿಸ್ನ ರೋಜರ್ ಫೆಡರರ್ ದಾಖಲೆಯನ್ನು ಮುರಿದಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಜೊಕೊವಿಕ್ 2011 ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ವಿಶ್ವ ನಂ.1 ಆಗಿ ಹೊರಹೊಮ್ಮಿದ್ದರು. 'ಬಿಗ್ 3' ಸ್ಪರ್ಧಿಗಳ ಪೈಕಿ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರು 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಿಗಳಾಗಿದ್ದರು.
ಸರ್ಬಿಯನ್‌ನ ಆಟಗಾರನ ಕಠಿಣ ಪರಿಶ್ರಮ, ತರಬೇತಿ ಮತ್ತು ಚುರುಕುತದಿಂದಾಗಿ ವೃತ್ತಿಜೀವನದ 36ನೇ ವಯಸ್ಸಿನಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿ ಉಳಿದಿದ್ದಾರೆ. ಕೋರ್ಟ್ನಲ್ಲಿ ಜಿಂಕೆಯಂತೆ ಜಿಗಿಯುವ ನೊವಾಕ್ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಯೋಗ ಮತ್ತು ಧ್ಯಾನವನ್ನು ದೀರ್ಘಕಾಲದಿಂದ ರೂಢಿಸಿಕೊಂಡು ಬಂದಿದ್ದಾರೆ. ಆರೋಗ್ಯಕರ ಆಹಾರವು ಅವರ ಜೀವನದ ಪ್ರಮುಖ ಅಂಶವಾಗಿದೆ.