ಸ್ಟಾವಂಜರ್ (ನಾರ್ವೆ):ಭಾರತದ ಯುವ ಚೆಸ್ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಗ್ನಾನಂದ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸಿದ್ದಾರೆ. ಶನಿವಾರ ರಾತ್ರಿ ಕ್ಲಾಸಿಕಲ್ ಚೆಸ್ ಐದನೇ ಸುತ್ತಿನಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದ್ದಾರೆ. ಈ ಗೆಲುವಿನೊಂದಿಗೆ ಪ್ರಗ್ನಾನಂದ ಮೊದಲ ಬಾರಿಗೆ ಕ್ಲಾಸಿಕ್ ಚೆಸ್‌ನಲ್ಲಿ ವಿಶ್ವದ ನಂಬರ್ 1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ವಿಶ್ವದ ಎರಡನೇ ಶ್ರೇಯಾಂಕದ ಫಾಬಿಯಾನೊ ಕರುವಾನಾ ಇಬ್ಬರನ್ನೂ ಸೋಲಿಸಿದಂತಾಗಿದೆ.
ನಾರ್ವೆ ಚೆಸ್ ಟೂರ್ನಿಯಲ್ಲಿನ ಅದ್ಭುತ ಪ್ರದರ್ಶನದಿಂದ ಪ್ರಗ್ನಾನಂದ ಅವರು ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ವಿಶ್ವ ಶ್ರೇಯಾಂಕದಲ್ಲಿ ಟಾಪ್ 10ರೊಳಗೆ ಸ್ಥಾನ ಪಡೆದಿದ್ದಾರೆ. ''ಪ್ರಗ್ ಈಸ್ ಬ್ಯಾಕ್. ಯುವ ಆಟಗಾರ ಚೆಸ್ ಜಗತ್ತನ್ನು ಮತ್ತೊಮ್ಮೆ ದಂಗುಬಡಿಸಿದ್ದಾರೆ. ಮೂರನೇ ಸುತ್ತಿನಲ್ಲಿ ವಿಶ್ವದ ನಂಬರ್ 1 ಆಟಗಾರನನ್ನು ಮಣಿಸಿದ್ದ ಅವರು, ಇದೀಗ 5ನೇ ಸುತ್ತಿನ ಆಟದಲ್ಲಿ ಜಗತ್ತಿನ 2ನೇ ಶ್ರೇಯಾಂಕದ ಆಟಗಾರನಿಗೆ ಸೋಲುಣಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕ್ಲಾಸಿಕಲ್ ಚೆಸ್‌ನಲ್ಲಿ ಈ ಇಬ್ಬರೂ ದಿಗ್ಗಜರ ವಿರುದ್ಧ ಗೆದ್ದಿದ್ದಾರೆ. ಪ್ರಗ್ನಾನಂದಗೆ ಇದೊಂದು ಅದ್ಭುತ ಟೂರ್ನಿ'' ಎಂದು ನಾರ್ವೆ ಚೆಸ್ ಎಕ್ಸ್ ಖಾತೆಯಲ್ಲಿ ಕೊಂಡಾಡಿದೆ.
18ರ ಹರೆಯದ ಪ್ರಗ್ನಾನಂದ ಅವರು ಮೂರನೇ ಸುತ್ತಿನಲ್ಲಿ ಕಾರ್ಲ್ಸನ್ಗೆ ಆಘಾತ ನೀಡಿದ್ದರು. ಬಿಳಿ ಕಾಯಿಗಳೊಂದಿಗೆ ಆಡಿದ್ದ ಕಳೆದ ವರ್ಷದ FIDE ಚೆಸ್ ವಿಶ್ವಕಪ್‌ನ ರನ್ನರ್‌ಅಪ್, ಕಾರ್ಲ್‌ಸೆನ್ ವಿರುದ್ಧ ಕೆಲ ಬುದ್ಧಿವಂತಿಕೆಯ ನಡೆಯಿಂದ ಗಮನ ಸೆಳೆದಿದ್ದರು. ಪ್ರಗ್ನಾನಂದ ತಮ್ಮ ಉದಯೋನ್ಮುಖ ವೃತ್ತಿಜೀವನದಲ್ಲಿ ಈ ಹಿಂದೆಯೂ ಕೂಡ ಕ್ಷಿಪ್ರ ಮತ್ತು ಬ್ಲಿಟ್ಜ್ ಚೆಸ್ ಆಟಗಳಲ್ಲಿ ಕಾರ್ಲ್‌ಸೆನ್ ವಿರುದ್ಧ ಕೆಲ ಗೆಲುವುಗಳನ್ನು ಸಾಧಿಸಿದ್ದಾರೆ.
5 ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ತಮ್ಮ ಮೊದಲ ಶಾಸ್ತ್ರೀಯ (ಕ್ಲಾಸಿಕಲ್) ಗೆಲುವು ದಾಖಲಿಸಿದ ಕೇವಲ ಒಂದು ದಿನದ ಬಳಿಕ ಭಾರತದ ಸ್ಟಾರ್ ಪ್ರಗ್ನಾನಂದ ಅವರು ಗುರುವಾರ 4ನೇ ಸುತ್ತಿನಲ್ಲಿ ಅಮೆರಿಕದ ಹಿಕರು ನಕಮುರಾ ವಿರುದ್ಧ ಸೋತಿದ್ದರು. ಪ್ರಗ್ನಾನಂದ ವಿರುದ್ಧ ನಕಮುರಾ ಅದ್ಭುತ ಆಟ ಪ್ರದರ್ಶಿಸಿದರು. ದೋಷರಹಿತವಾಗಿ ಆಡಿದ ನಕಮುರಾ ಜಯದೊಂದಿಗೆ ಒಟ್ಟಾರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.