ನವದೆಹಲಿ:ನಾಯಕಿ ಹರ್ಮನ್ಪ್ರೀತ್ ಕೌರ್ (95) ಅವರ ರೌದ್ರಾವತಾರದ ಬ್ಯಾಟಿಂಗ್ನಿಂದಾಗಿ ಮಹಿಳಾ ಪ್ರೀಮಿಯರ್ ಲೀಗ್ನ (ಡಬ್ಲ್ಯೂಪಿಎಲ್) ಬಲಿಷ್ಠ ಮತ್ತು ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್ ವಿರುದ್ಧ 7 ವಿಕೆಟ್ಗಳ ಅಧಿಕಾರಯುತ ಗೆಲುವು ಸಾಧಿಸಿತು. ಜೊತೆಗೆ ಮೊದಲ ತಂಡವಾಗಿ ಪ್ಲೇಆಫ್ ಹಂತಕ್ಕೇರಿತು.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯವು ಅಕ್ಷರಶಃ ಮುಂಬೈ ನಾಯಕಿಯ ಬ್ಯಾಟಿಂಗ್ ಪ್ರದರ್ಶನಕ್ಕೆ ಏರ್ಪಡಿಸಿದ್ದ ವೇದಿಕೆ ಎಂಬಂತಿತ್ತು. ಗುಜರಾತ್ ವನಿತೆಯರು ನೀಡಿದ 190 ರನ್ಗಳ ಬೃಹತ್ ಮೊತ್ತವನ್ನು 1 ಎಸೆತ ಬಾಕಿ ಇರುವಂತೆಯೇ ಮುಂಬೈ ವನಿತೆಯರು ದಾಟಿ ವಿಜಯೋತ್ಸವ ಆಚರಿಸಿದರು. ಕಳೆದುಕೊಂಡಿದ್ದು, 3 ವಿಕೆಟ್ ಮಾತ್ರ.
ಭಾಟಿಯಾ- ಕೌರ್ ಹೋರಾಟ;ಗೆಲುವಿಗೆ ದೊಡ್ಡ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭಿಕ ಆಟಗಾರ್ತಿ ಯಾಸ್ಟಿಕ ಭಾಟಿಯಾ ಮತ್ತು ಹೈಲಿ ಮ್ಯಾಥ್ಯೂಸ್ ಭರ್ಜರಿ ಆರಂಭ ನೀಡಿದರು. ಇಬ್ಬರು ಸೇರು ಮೊದಲ ವಿಕೆಟ್ಗೆ 50 ರನ್ ಮಾಡಿದರು. ಮ್ಯಾಥ್ಯೂಸ್ 18 ರನ್ ಗಳಿಸಿ ಔಟಾದರು. ಬಳಿಕ ಬಂದ ನಾಟ್ ಸೀವಿಯರ್ ಬ್ರಂಟ್ (2) ಅಲ್ಪಮೊತ್ತಕ್ಕೆ ವಿಕೆಟ್ ನೀಡಿದರು. ಆಗ ತಂಡದ ಮೊತ್ತ 7.3 ಓವರ್ಗಳಲ್ಲಿ 57-2 ಆಗಿತ್ತು. ಈ ವೇಳೆ ಮೈದಾನಕ್ಕೆ ಇಳಿದ ಕೌರ್ ಗುಜರಾತ್ ಬೌಲರ್ಗಳ ಮೇಲೆ ದಂಡೆತ್ತಿ ಹೋದರು.
ಇಬ್ಬರೂ ಬಿರುಸಾದ ಬ್ಯಾಟ್ ಬೀಸಿದರು. 49 ರನ್ ಗಳಿಸಿದ್ದಾಗ ಭಾಟಿಯಾ ಔಟಾಗಿ ಅರ್ಧಶತಕದಿಂದ ತಪ್ಪಿಸಿಕೊಂಡರು. ಕೊನೆಯ 5 ಓವರ್ಗಳಲ್ಲಿ 14 ರ ಸರಾಸರಿಯಲ್ಲಿ 72 ರನ್ ಅಗತ್ಯವಿದ್ದಾಗ ಬ್ಯಾಟ್ಗೆ ಬುದ್ಧಿ ಹೇಳಿದ ಕೌರ್ ಪ್ರತಿ ಎಸೆತದಲ್ಲೂ ರನ್ ತಂದರು. ಸ್ಪಿನ್ನರ್ ರಾಣಾ ಎಸೆದ 18ನೇ ಓವರ್ನಲ್ಲಿ 6, 4, 4, 6 ರ ಕ್ರಮವಾಗಿ ಬಾರಿಸಿ 24 ರನ್ ಸಿಡಿಸಿದರು.
ಅಮೆಲಿಯಾ ಕೆರ್ ಜೊತೆಗೂಡಿ ಕೇವಲ 38 ಎಸೆತಗಳಲ್ಲಿ ನಾಲ್ಕನೇ ವಿಕೆಟ್ಗೆ 93 ರನ್ ಸೇರಿಸಿದರು. ಇದರಲ್ಲಿ ಕೆರ್ 12 ರನ್ ಮಾಡಿದರೆ, 81 ರನ್ ಹರ್ಮನ್ಪ್ರೀತ್ ಗಳಿಸಿದರು. ಕೊನೆಯಲ್ಲಿ ಕೌರ್ ಔಟಾಗದೇ 95 ರನ್ ಗಳಿಸಿದರು. ಇದು ಅವರ ರೌದ್ರಾವತಾರದ ಬ್ಯಾಟಿಂಗ್ಗೆ ಸಾಕ್ಷಿಯಾಗಿತ್ತು. ಕೊನೆಯಲ್ಲಿ 19.5 ಓವರ್ಗಳಲ್ಲಿ 191 ರನ್ ಗಳಿಸಿದ ಮುಂಬೈ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಆಡಿರುವ 7 ಪಂದ್ಯಗಳಲ್ಲಿ ಕೌರ್ ಪಡೆ 5 ರಲ್ಲಿ ಗೆದ್ದು 2 ರಲ್ಲಿ ಸೋತಿದೆ.
ಬೆತ್ ಮೂನಿ- ಹೇಮಲತಾ ಅಬ್ಬರ:ಇದಕ್ಕೂ ಮುನ್ನ ಗುಜರಾತ್ ಜೈಂಟ್ಸ್ನ ನಾಯಕಿ ಬೆತ್ ಮೂನಿ ಮತ್ತು ಡಿ ಹೇಮಲತಾ ಅವರು ಅಬ್ಬರಿಸಿ ಅರ್ಧಶತಕ ಬಾರಿಸಿದರು. ಮೂನಿ 35 ಎಸೆತಗಳಲ್ಲಿ 66 ರನ್ ಮಾಡಿದರು. ಇದರಲ್ಲಿ 8 ಬೌಂಡರಿ, 3 ಸಿಕ್ಸರ್ಗಳಿದ್ದವು. ಹೇಮಲತಾ 74 ರನ್ ಮಾಡಿದರು. ಇದಕ್ಕೆ ತೆಗೆದುಕೊಂಡಿದ್ದು 40 ಎಸೆತ. ಇಬ್ಬರೂ ಸೇರಿ ಎರಡನೇ ವಿಕೆಟ್ಗೆ 121 ರನ್ ಸೇರಿಸಿದರು.
ಇದನ್ನೂ ಓದಿ:ದೀಪ್ತಿ ಶರ್ಮಾ 'ಹ್ಯಾಟ್ರಿಕ್' ಶೋ: ಡೆಲ್ಲಿ ವಿರುದ್ಧ ಯುಪಿ ವನಿತೆಯರಿಗೆ 1 ರನ್ ರೋಚಕ ಗೆಲುವು